ಸ್ಟಾರ್ ಸುವರ್ಣ ಮತ್ತೊಂದು ವಿಭಿನ್ನ ರೀತಿಯ ಧಾರವಾಹಿಯನ್ನು ಕನ್ನಡ ವೀಕ್ಷಕರಿಗೆ ನೀಡಲು ಸಜ್ಜಾಗಿದೆ. ಕನ್ನಡ ಧಾರಾವಾಹಿಗಳ ಸಾಲಿನಲ್ಲಿ "ನಿಹಾರಿಕಾ'' ವಿಶಿಷ್ಟವಾಗಿ ನಿಲ್ಲುತ್ತದೆ. ಏಕೆಂದರೆ ಇದು ಅತ್ತೆ ಸೊಸೆ ಜಗಳದಂತಹ ಮಾಮೂಲಿ `ಕಿಚನ್ ಸ್ಟೋರಿ' ಅಲ್ಲ. ಕೇವಲ ಪ್ರೀತಿ ಪ್ರೇಮಗಳ ಸುತ್ತ ಸುತ್ತುವ ಸಾಮಾನ್ಯ ಕಥೆಯಲ್ಲ ಎಂಬುದು ವಾಹಿನಿಯ ಅಭಿಪ್ರಾಯ.
ಶ್ರೀಮಂತ ಹುಡುಗ ವಿರಾಟ್‍ನ ದಾಹಕ್ಕೆ ಒಂದು ಕುಟುಂಬ ಸರ್ವನಾಶವಾಗಿರುತ್ತದೆ. ಆ ಸೇಡನ್ನು ತೀರಿಸಿಕೊಳ್ಳಲು ಬರುವ ಹುಡುಗಿ ನಿಹಾರಿಕಾ. ನಿಹಾರಿಕಾ ಎಂದರೆ ಜಗತ್ತಿನ ಅತ್ಯಂತ ಸುಂದರಿ. ಬುದ್ಧಿವಂತಿಕೆಯಿಂದ ದುಷ್ಟರನ್ನು ಹಿಮ್ಮೆಟ್ಟಿಸುತ್ತಾಳೆ. ತನ್ನ ಸೌಂದರ್ಯದಿಂದ ವಿರಾಟ್‍ನನ್ನು ಸೆಳೆದು ಅವನು ಮಾಡಿದ ಪಾಪಕ್ಕೆ ಪಾಠ ಕಲಿಸುತ್ತಾಳೆ.
ಮಗನ ತಪ್ಪೆಲ್ಲವನ್ನು ಮುಚ್ಚಿಹಾಕುವ ಅಮ್ಮ ಸಾಕ್ಷಿ, ಅವಳ ತಾಳಕ್ಕೆ ತಕ್ಕಂತೆ ಕುಣಿಯುವ ಗಂಡ ರಾಜನಾಥ್. ಹಣದಿಂದ ಸತ್ಯವನ್ನೂ ಕೊಂಡುಕೊಳ್ಳಬಹುದು ಎಂದುಕೊಂಡ ಶ್ರೀಮಂತ `ಯಾಜಿ' ಮನೆತನಕ್ಕೆ ಒಬ್ಬ ಸಾಮಾನ್ಯ ಹುಡುಗಿ ನಿಹಾರಿಕಾ ಹೇಗೆ ಬುದ್ಧಿ ಕಲಿಸುತ್ತಾಳೆ, ಪ್ರತಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದಿರಿಸುತ್ತಾಳೆ ಎನ್ನುವ ಕಥೆ, ಪ್ರತಿ ಸಂಚಿಕೆಯನ್ನೂ ಕಾದು ಕುಳಿತು ನೋಡುವಂತೆ ಮಾಡುತ್ತದೆ.
ಜೊತೆಗೆ ಮೇಕಿಂಗ್ ಇದರ ಮುಖ್ಯ ಆಕರ್ಷಣೆಯಾಗಲಿದೆ. ಈಗಾಗಲೇ ಹಿರಿತೆರೆಯಲ್ಲಿ ಹೆಸರು ಮಾಡಿರುವ ತೇಜಸ್ವಿನಿ ಪ್ರಕಾಶ್ ಮೊದಲ ಬಾರಿಗೆ ನಿಹಾರಿಕಾ ಮೂಲಕ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಿರುತೆರೆಯ ಹೆಸರಾಂತ ನಟ ವಿರಾಟ್, ದೀಪಕ್ ಶೆಟ್ಟಿ, ಶಾಂತಲಾ ಕಾಮತ್, ಪ್ರದೀಪ್ ಚಂದ್ರ ಹೀಗೆ ನುರಿತ ಕಲಾವಿದರ ಬಳಗವೇ `ನಿಹಾರಿಕಾ'ದಲ್ಲಿದೆ.
ಹೊಸ ರೀತಿಯ ಕಥೆ, ನಿರೂಪಣೆ, ನಿರ್ಮಾಣ ಕನ್ನಡ ಧಾರಾವಾಗಿ ಪ್ರೇಮಿಗಳಿಗೆ ರಸದೌತಣ ನೀಡಲಿದೆ. ಕನ್ನಡಿಗರ ಮನೆ ಮಾತಾಗಿರುವ ನಿರ್ದೇಶಕ ವಿನು ಬಳಂಜ ಈ ಧಾರಾವಾಹಿಯ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆರ್ ದೀಪಕ್ ಗೌಡ `ಲಿವಿಂಗ್ ರೂಂ' ಪ್ರೊಡಕ್ಷನ್ ಅಡಿಯಲ್ಲಿ 'ನಿಹಾರಿಕಾ' ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಖ್ಯಾತ ಬರಹಗಾರ ಜೋಗಿ ಚಿತ್ರಕಥೆ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇದಕ್ಕೆ ರವಿ ಅವರ ಛಾಯಾಗ್ರಹಣ, ಮನು ಅವರ ಸಂಕಲನವಿದೆ. "ಅತ್ತೆ - ಸೊಸೆ ಜಗಳಗಳ ದ್ಧಾರಾವಾಹಿಗಿಂತ ಇದು ಭಿನ್ನವಾಗಿದೆ. ಇಲ್ಲಿ ನಾಯಕಿ ಕಣ್ಣೀರು ಹಾಕುತ್ತ ಕುಳಿತುಕೊಳ್ಳುವುದಿಲ್ಲ, ಬದಲಾಗಿ ಅನ್ಯಾಯದ ವಿರುದ್ಧ ಧೈರ್ಯದಿಂದ ತಿರುಗಿ ಬೀಳುತ್ತಾಳೆ. ಈ ರೀತಿ ನಿಹಾರಿಕಾ ಆಧುನಿಕ ಸಮಕಾಲೀನ ಕಥೆಯ ಧಾರಾವಾಹಿಯಾಗಿದ್ದು ಎಲ್ಲರಿಗೂ ಇಷ್ಟವಾಗುತ್ತದೆ.
ಈ ಕಥೆಯನ್ನು ಅದ್ಭುತವಾಗಿ ತೆರೆಯ ಮೇಲೆ ತರಲು ವಿನು ಬಳಂಜ ಅಂತಹವರ ಅನುಭವಿ ತಂಡ ನಮ್ಮ ಜೊತೆಗೆ ಇದೆ." ಎನ್ನುವುದು ಸ್ಟಾರ್ ಸುವರ್ಣ ವಾಹಿನಿಯ ಫಿಕ್ಷನ್ ಹೆಡ್ ಕಾರ್ತಿಕ್ ಪರಾಡ್ಕರ್ ಅವರ ಅಭಿಪ್ರಾಯ. ವಿಭಿನ್ನ ಕಥೆಯ `ನಿಹಾರಿಕಾ' ಧಾರಾವಾಹಿ ಇದೇ ಡಿಸೆಂಬರ್ 12 ರಿಂದ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.