ನವದೆಹಲಿ: ವೃತ್ತಿ ಜೀವನದಲ್ಲಿ ಆಕಾಶದಲ್ಲಿ ಹಾರಾಡುತ್ತಿರುವಾಗಲೇ ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾಗೆ ಗಾಯವೆಂಬ ಸೂಜಿ ಚುಚ್ಚಿದೆ.
ಇದರಿಂದಾಗಿ ಅವರು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಲು ಸಾಧ‍್ಯವಾಗುತ್ತಿಲ್ಲ. ಇದು ಅವರಿಗೆ ತೀವ್ರ ಬೇಸರ ತಂದಿದೆ. ತೊಡೆಸಂಧು ನೋವಿಗೊಳಗಾಗಿರುವ ನೀರಜ್ ಚೋಪ್ರಾ ಕಾಮನ್ ವೆಲ್ತ್ ಗೇಮ್ಸ್ ನಿಂದ ಹೊರಬಿದ್ದಿದ್ದಾರೆ.
ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ನೀರಜ್ ಚೋಪ್ರಾ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ನಾನು ನನ್ನ ದೇಶ ಪ್ರತಿನಿಧಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ನನಗೆ ತೀವ್ರ ಬೇಸರ ಉಂಟುಮಾಡಿದೆ. ಅಥ್ಲೆಟಿಕ್ ಚಾಂಪಿಯನ್ ಶಿಪ್ ಕೂಟದಲ್ಲೇ ನಾಲ್ಕನೇ ಎಸೆತದ ಬಳಿಕ ನನಗೆ ನೋವು ಕಾಡಲು ಆರಂಭಿಸಿತ್ತು. ಅಮೆರಿಕಾದಲ್ಲಿರುವ ವೈದ್ಯರ ತಂಡದ ಜೊತೆ ಗಾಯದ ಬಗ್ಗೆ ಚರ್ಚಿಸಿದಾಗ ಭವಿಷ್ಯದ ದೃಷ್ಟಿಯಿಂದ ಈಗ ವಿಶ್ರಾಂತಿ ಪಡೆಯುವುದೇ ಉತ್ತಮ ಎಂದರು. ಭಾರತ ತಂಡದ ಧ್ವಜಾಧಾರಿಯಾಗುವ ಅವಕಾಶ ಕಳೆದುಕೊಂಡಿರುವುದು ಮತ್ತು ಕಾಮನ್ ವೆಲ್ತ್ ಗೇಮ್ಸ್ ಪದಕ ಉಳಿಸಿಕೊಳ್ಳಲು ಸಾಧ‍್ಯವಾಗದೇ ಹೋಗಿರುವುದು ನನಗೆ ತೀವ್ರ ನೋವು ತಂದಿದೆ. ಈ ಸಂದರ್ಭದಲ್ಲಿ ನನಗೆ ಬೆಂಬಲವಾಗಿ ನಿಂತಿರುವ ಇಡೀ ದೇಶಕ್ಕೆ ಧನ್ಯವಾದಗಳು ಎಂದಿದ್ದಾರೆ ನೀರಜ್ ಚೋಪ್ರಾ.