ಮಲಬಾರ್-2017 ಸಮರಾಭ್ಯಾಸದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಅಮೆರಿಕದ ನೌಕಾಪಡೆಯ ನಾವಿಕರು ಮಂಗಳವಾರ ಚೆನ್ನೈನ ಎಂವೈಸಿಎ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸ್ನೇಹಪೂರ್ವಕ ಬಾಸ್ಕೆಟ್ ಬಾಲ್ ಪಂದ್ಯ ಆಡಿದರು. ವಿದ್ಯಾರ್ಥಿಗಳ ತಂಡ, ನಾವಿಕರ ತಂಡವನ್ನ 36-35ರ ಅಂತರದಿಂದ ಮಣಿಸಿತು.
ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅಮೆರಿಕದ ಕಾನ್ಸುಲೇಟ್ ಜನರಲ್ ಡೇವಿಡ್ ಬಲ್ಲಾರ್ಡ್, ಬಾಸ್ಕೆಟ್ ಬಾಲ್ ಉಗಮದ 125ನೇ ವರ್ಷಾಚರಣೆಯ ಈ ಶುಭ ಸಂದರ್ಭ ಅಮೆರಿಕದ ನಾವಿಕರು ಮತ್ತು ಭಾರತದ ವಿದ್ಯಾರ್ಥಿಗಳು ಸೌಹಾರ್ದಯುತ ಪಂದ್ಯವನ್ನಾಡುವ ಮೂಲಕ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಭಾರತದ ಮೊದಲ ಬಾಸ್ಕೆಟ್ ಬಾಲ್ ಕೋರ್ಟ್`ಗಿಂತ ಒಳ್ಳೆಯ ಜಾಗ ಇನ್ನೊಂದಿಲ್ಲ ಎಂದು ಬಣ್ಣಿಸಿದರು.
ಆಟಗಾರರನ್ನ ಹುರಿದುಂಬಿಸಿದ ಅಮೆರಿಕದ ಕಮ್ಯಾಂಡಿಂಗ್ ಆಫೀಸರ್ ಕ್ಯಾಪ್ಟನ್ ಕೆವಿನ್ ಲೆನೋಕ್ಸ್, `ದೇಶ-ದೇಶಗಳ ನಡುವೆ ಬಾಂಧವ್ಯ ವೃದ್ಧಿಯಾಗಿದೆ ಎಂದು ನಾವು ಮಾತನಾಡುತ್ತಿರುತ್ತೇವೆ. ಆದರೆ, ಇದು ನಿಜವಾದ ಬಾಂಧವ್ಯ ವೃದ್ಧಿ’ ಎಂದರು.
ವಿಜೇತರಿಗೆ ಕಾನ್ಸುಲೇಟ್ ಜನರಲ್ ಬಲ್ಲಾರ್ಡ್ ಮತ್ತು ಕ್ಯಾಪ್ಟನ್ ಲೆನೋಕ್ಸ್ ಪದಕಗಳನ್ನ ಪ್ರದಾನ ಮಾಡಿದರು.
ಮಲಬಾರ್-2017 ಸಮರಾಭ್ಯಾಸದಲ್ಲಿ ಭಾಗವಹಿಸಿರುವ ಅಮೆರಿಕದ ನಾವಿಕರ ಸಮೂಹ ಬಾಂಧವ್ಯ ವೃದ್ಧಿಗಾಗಿ ಆಯೋಜಿಸಿರುವ ಕಾರ್ಯಕ್ರಮಗಳ ಭಾಗವಾಗಿ ಅಮೆರಿಕ ರಾಯಭಾರ ಕಚೇರಿ ಮತ್ತು ಎಂವೈಸಿಎ ಕಾಲೇಜು ಸಹಯೋಗದಲ್ಲಿ ಬಾಸ್ಕೆಟ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಎಂವೈಸಿಎ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ಕಾಲೇಜಿನ ಛೇರ್ಮನ್ ಕೋಶಿ ಮ್ಯಾಥ್ಯೂ, ಪ್ರಾಂಶುಪಾಲ ಡಾ. ಜಾರ್ಜ್ ಅಬ್ರಹಾಂ ಮತ್ತು ಎಂವೈಸಿಎ ಸದರನ್ ಇಂಡಿಯಾ ಪ್ರದೇಶಿಕ ಕಾರ್ಯದರ್ಶಿ ಪೌಲ್ಸನ್ ಥಾಮ್ಸನ್ ಸಹ ಕಾರ್ಯಕ್ರಮವನ್ನ ಕೊಂಡಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ