ವಿಜಯಪುರ:ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತದ ವನಿತೆಯರು ವಿಶ್ವಕಪ್ ಫೈನಲ್ ಪ್ರವೇಶಿಸಿದ್ದಾರೆ. ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತದ ವನಿತೆಯರು ಜಯಶಾಲಿಗಳಾಗಲಿ ಎಂದು ರಾಜೇಶ್ವರಿ ಗಾಯಕವಾಡ್ ತವರೂರು ವಿಜಯಪುರ ಜಿಲ್ಲೆಯ ಜನತೆ ಪ್ರಾರ್ಥನೆಯಲ್ಲಿ ನಿರತರಾಗಿದ್ದಾರೆ.
ರಾಜೇಶ್ವರಿ ಗಾಯಕವಾಡ್ ವ್ಯಾಸಂಗ ನಡೆಸಿದ ಬಿಡಿಇ ಸೊಸೈಟಿಯ ಬಾಲಕಿಯರ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಅಂತಿಮ ಬಿಎ ವ್ಯಾಸಂಗ ನಡೆಸುತ್ತಿರುವ ಬಿಎಲ್‌ಡಿಇ ಸಂಸ್ಥೆಯ ಬಂಗಾರೆಮ್ಮ ಸಜ್ಜನ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ರಾಜೇಶ್ವರಿ ಉತ್ತಮ ಆಟವಾಡಲೆಂದು ಶಾಲಾ–ಕಾಲೇಜಿನಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು.
19 ವರ್ಷದೊಳಗಿನ ಮಹಿಳಾ ಕ್ರಿಕೆಟ್‌ನಲ್ಲಿ ಉತ್ತಮ ಆಟವಾಡಿದ್ದ ಅವರು 2007ರಲ್ಲಿ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದರು. 2009ರಲ್ಲಿ ರಾಷ್ಟ್ರೀಯ ಟ್ವೆಂಟಿ–20 ಟೂರ್ನಿಯಲ್ಲಿ ಆಡಿದ್ದರು. 2014ರ ಜನವರಿಯಲ್ಲಿ ರಾಂಚಿಯಲ್ಲಿ ನಡೆದ ಚಾಲೆಂಜರ್ ಟ್ರೋಫಿಯಲ್ಲಿ ಇಂಡಿಯಾ ಬ್ಲ್ಯೂ ತಂಡದಲ್ಲಿ ಆಡಿದ್ದರು. ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 2015ರ ಜೂನ್ 28ರಂದು ನಡೆದ ಏಕದಿನ ಪಂದ್ಯದಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಒಟ್ಟಿನಲ್ಲಿ ತಮ್ಮೂರಿನ ಹುಡುಗಿ ಅಂತಿಮ ಪಂದ್ಯದಲ್ಲೂ ಅಮೋಘ ಆಟವಾಡಲಿ, ದೇಶಕ್ಕೆ ಕೀರ್ತಿ ತರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.