ಆರಂಭಿಕ ರೋಹಿತ್ ಶರ್ಮ ಹಾಗೂ ಚೇತೇಶ್ವರ್ ಪೂಜಾರ ಅವರ ಅಮೋಘ ಜೊತೆಯಾಟದ ನೆರವಿನಿಂದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಗೆ ತಿರುಗೇಟು ನೀಡಿದೆ.
ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಗುರುವಾರ ಚಹಾ ವಿರಾಮದ ವೇಳೆಗೆ ಭಾರತ 1 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದೆ. ಈ ಮೂಲಕ ಭಾರತ ಮುನ್ನಡೆ ಪಡೆಯಬೇಕಾದರೆ ಇನ್ನೂ 242 ರನ್ ಗಳಿಸಬೇಕಾಗಿದೆ.
ಕೆಎಲ್ ರಾಹುಲ್ (8) ವಿಫಲರಾದ ನಂತರ ರೋಹಿತ್ ಶರ್ಮ ಮತ್ತು ಪೂಜಾರ ಮುರಿಯದ 2ನೇ ವಿಕೆಟ್ ಗೆ 78 ರನ್ ಪೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ರೋಹಿತ್ ಶರ್ಮ 152 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 59 ರನ್ ಗಳಿಸಿದ್ದರೆ, ಪೂಜಾರ 72 ಎಸೆತಗಳಲ್ಲಿ 7 ಬೌಂಡರಿ ಸೇರಿದ 40 ರನ್ ಬಾರಿಸಿ ತಂಡವನ್ನು ಮುನ್ನಡೆಸಿದ್ದಾರೆ.