ನವದೆಹಲಿ:ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಎರಡು ವರ್ಷ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್ 11ನೇ ಆವೃತ್ತಿಯ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದುಕೊಂಡಿವೆ. ಈ ಕುರಿತು ಬಿಸಿಸಿಐ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಲೋಧಾ ಸಮಿತಿ ಎರಡೂ ತಂಡಗಳಿಗೆ ಎರಡು ವರ್ಷಗಳ ಕಾಲ ಐಪಿಎಲ್ ಟೂರ್ನಿಯಲ್ಲಿ ಆಡದಂತೆ ನಿಷೇಧ ಹೇರಿತ್ತು. ಇದೀಗ ಈ ನಿಷೇಧ ಅಂತ್ಯವಾಗಿದ್ದು, ಮುಂದಿನ ಐಪಿಎಲ್‌ನಲ್ಲಿ ಚೆನ್ನೈ ಹಾಗೂ ರಾಜಸ್ಥಾನ ತಂಡಗಳು ಆಡಲು ಅರ್ಹವಾಗಿವೆ.
ಉಭಯ ತಂಡಗಳ ವೈಭವವನ್ನು ಅಭಿಮಾನಿಗಳು ಮತ್ತೆ ನೋಡಬಹುದು ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ತಿಳಿಸಿದ್ದಾರೆ. ಐಪಿಎಲ್‌ನ ಪ್ರಾಂಚೈಸಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಸ್ಥಾನ ರಾಯಲ್ಸ್ ತಂಡಗಳನ್ನು 11ನೇ ಆವೃತ್ತಿಯ ಟೂರ್ನಿಗೆ ಆಹ್ವಾನಿಸುತ್ತಿರುವುದು ಖುಷಿಯಾಗುತ್ತಿದೆ. ಉಭಯ ತಂಡಗಳ ಜೊತೆ ನಾವು ಬಲವಾದ ಸಂಬಂಧ ಹೊಂದಿದ್ದೇವೆ. ಅದೇ ರೀತಿ ಮುಂದೆಯೂ ಮುಂದುವರೆಸಿಕೊಂಡು ಹೋಗುವ ವಿಶ್ವಾಸ ತಮಗಿದೆ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.