ಮುಂಬರುವ ಏಷ್ಯಾ ಕಪ್ ಮತ್ತು ಟಿ-20ವಿಶ್ವಕಪ್ ಗೆಲ್ಲುವುದೇ ನನ್ನ ಗುರಿ ಎಂದು ಭಾರತ ಮತ್ತು ಆರ್ ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈನಲ್ಲಿ ನಡೆದ ಐಪಿಎಲ್ ಟಿ-20 ಟೂರ್ನಿಯ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, ಕ್ರಿಕೆಟ್ ನಿಂದ ಸ್ವಲ್ಪ ದಿನ ದೂರ ಉಳಿಯುವುದು ಒಳ್ಳೆಯ ಸಲಹೆ. ಆದರೆ ನನ್ನ ಆಟ ಮುಂದುವರಿಸಲು ಮುಂದಿನ ಮಹತ್ವದ ಟೂರ್ನಿಗಳು ಮುಖ್ಯ ಎಂದರು.
ಐಪಿಎಲ್ ನಲ್ಲಿ ರನ್ ಹೊಳೆ ಹರಿಸುವ ಮೂಲಕ ಹಲವು ದಾಖಲೆ ಬರೆದಿದ್ದ ವಿರಾಟ್ ಕೊಹ್ಲಿ ವೃತ್ತಿಜೀವನದ ಅತ್ಯಂತ ಕಳಪೆ ಫಾರ್ಮ್ ನಲ್ಲಿದ್ದಾರೆ. ಇದುವರೆಗೆ ಐಪಿಎಲ್ ನಲ್ಲಿ 1 ಅರ್ಧಶತಕ ಸೇರಿ 216 ರನ್ ಮಾತ್ರ ಗಳಿಸಿದ್ದಾರೆ. ಅದರಲ್ಲೂ ಮೂರು ಬಾರಿ ಗೋಲ್ಡನ್ ಡಕ್ ಗೆ ಔಟಾಗಿರುವುದು ಚಿಂತೆಗೀಡು ಮಾಡಿದೆ.
ನಾನು ಸಮಸ್ಥಿತಿ ಕಾಯ್ದುಕೊಳ್ಳುವತ್ತ ಗಮನ ಹರಿಸಿದ್ದೇನೆ. ವಿಶ್ರಾಂತಿ ಪಡೆಯುವುದೋ ಅಥವಾ ಮುಂದುವರಿಯುವುದೋ ಎಂಬ ಬಗ್ಗೆ ಸ್ಪಷ್ಟತೆ ಇನ್ನೂ ಬಂದಿಲ್ಲ. ಒಂದು ಬಾರಿ ನಿರ್ದಿಷ್ಟ ತೀರ್ಮಾನಕ್ಕೆ ಬಂದರೆ ಹಿಂತಿರುಗಿ ನೋಡುವುದಿಲ್ಲ ಎಂದು ಕೊಹ್ಲಿ ಹೇಳಿದರು.
ನನ್ನ ಪ್ರಮುಖ ಗುರಿ ಇರುವುದು ಭಾರತ ಮುಂಬರುವ ಏಷ್ಯಾಕಪ್ ಮತ್ತು ಟಿ-20 ವಿಶ್ವಕಪ್ ಗೆಲ್ಲಲು ಸಹಾಯ ಮಾಡುವುದು. ತಂಡಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ ಎಂದು ಕೊಹ್ಲಿ ಸ್ಪಷ್ಟಪಡಿಸಿದರು.
ನಾನು ತುಂಬಾ ಕ್ರಿಕೆಟ್ ಆಡಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ಎಲ್ಲಾ ಮೂರು ಮಾದರಿಗಳಲ್ಲಿ ಆಡಿದ್ದೇನೆ. ಐಪಿಎಲ್ ನಲ್ಲೂ ಆಡುತ್ತಾ ಬಂದಿದ್ದೇನೆ. ಆದ್ದರಿಂದ ವೃತ್ತಿಜೀವನದಲ್ಲಿ ಏಳುಬೀಳು ಸಹಜ. ಅದರಲ್ಲೂ ಕಳೆದ 7-8 ವರ್ಷಗಳಿಂದ ನಾಯಕತ್ವದ ಹೊಣೆ ಇತ್ತು. ಆದ್ದರಿಂದ ಹೊರೆ ಹೆಚ್ಚಾದಂತೆ ಭಾಸವಾಗಿತ್ತು ಎಂದು ಕೊಹ್ಲಿ ನುಡಿದರು.