ನಾಡಿನಾದ್ಯಂತ ಶಿವರಾತ್ರಿ ಸಂಭ್ರಮಾಚರಣೆ ಮನೆಮಾಡಿದ್ದು, ಶಿವದೇವಾಲಯಗಳಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಬೆಂಗಳೂರಿನ ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ನಸುಕಿನಿಂದಲೇ ವಿಶೇಷ ಅಭಿಷೇಕ ನಡೆಯುತ್ತಿದೆ. ಇಂದು ಸಂಜೆಯವರೆಗೂ ಪೂಜೆ ನಡೆಯಲಿದ್ದು 2 ಸಾವಿರ ಲೀಟರ್ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಲಾಗುತ್ತಿದೆ. ವಿಶೇಷ ಪೂಜಾ ಕೈಂಕರ್ಯವನ್ನು ವೀಕ್ಷಿಸಲು ದೇವಸ್ಥಾನದ ಹೊರಗೂ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನಾಲ್ಕು ಗಂಟೆಯಿಂದ ಜನರು ಸರತಿ ಸಾಲಲ್ಲಿ ನಿಂತು ತಮ್ಮ ಆರಾಧ್ಯ ದೈವದ ದರ್ಶನವನ್ನು ಪಡೆಯುತ್ತಿದ್ದಾರೆ. ದೇವಸ್ಥಾನದಲ್ಲಿ ಎಳನೀರು ಹೂವು ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.
ಹುಬ್ಬಳ್ಳಿಯ ಸಿದ್ಧಾರೂಡ ಮಠದಲ್ಲಿ ಅಪಾರ ಸಂಖ್ಯೆಯಲ್ಲಿ ಹರಿದುಬರುತ್ತಿರುವ ಜನರು ವಾಡಿಕೆಯಂತೆ ದೇವರ ದರ್ಶನ ಪಡೆದು ಉಪವಾಸವನ್ನು ಆರಂಭಿಸುತ್ತಿದ್ದಾರೆ.
ಮೈಸೂರಿನ ತ್ರೀನೇಶ್ವರ ದೇವಸ್ಥಾನದಲ್ಲಿ ಸಹ ಶಿವಪೂಜೆ ವೈಭವದಿಂದ ನಡೆಯುತ್ತಿದ್ದು 11 ಕೆಜಿ ತೂಕದ ಚಿನ್ನ ಲೇಪಿತ ಮುಖವನ್ನು ಧರಿಸಿರುವ ಶಿವನನ್ನು ಕಾಣಲು ಭಕ್ತಗಣ ತಂಡೋಪತಂಡವಾಗಿ ಹರಿದು ಬರುತ್ತಿದೆ.
ಮಂಡ್ಯದ ಪ್ರಸಿದ್ಧ ರಾಮಲಿಂಗೇಶ್ವರ ದೇವಾಲಯದಲ್ಲಿ ನಸುಕಿನಿಂದ ಪೂಜೆ- ಅಭಿಷೇಕ್ ಜೋರಾಗಿ ನಡೆಯುತ್ತಿದೆ.