ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಇಂಡಿಯಾ ಗೇಟ್ ಸುತ್ತಮುತ್ತಲೂ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ.
ಶಂಕಿತ ಉಗ್ರರ ಬಂಧನ ಮತ್ತು ಭಯೋತ್ಪಾದಕ ಗುಂಪುಗಳಿಂದ ದಾಳಿ ಬೆದರಿಕೆ ಇರುವ ಕುರಿತು ಗುಪ್ತಚರ ದಳಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 40,000ಕ್ಕೂ ಹೆಚ್ಚು ಭದ್ರತಾ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಎಲ್ಲ ಶಂಕಿತ ಉಗ್ರರ ಭಾವಚಿತ್ರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು ಎಲ್ಲ ರೈಲು ನಿಲ್ದಾಣಗಳಲ್ಲಿ ಮತ್ತು ಮೆಟ್ರೋ, ಅಂತರರಾಜ್ಯ ಬಸ್ ನಿಲ್ದಾಣಗಳಲ್ಲಿ ಅವನ್ನು ಲಗತ್ತಿಸಿ ಎಚ್ಚರಿಕೆ ಕಾಯ್ದುಕೊಳ್ಳಬೇಕಾಗಿ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
40,000ಕ್ಕೂ ಹೆಚ್ಚು ದೆಹಲಿ ಪೊಲೀಸ್ ಮತ್ತು ಅರೆಸೇನಾ ಪಡೆ ಸಿಬ್ಬಂದಿ ನವದೆಹಲಿಯಾದ್ಯಂತ ನಿಯೋಜನೆಗೊಂಡಿದ್ದು, ವಿಶೇಷವಾಗಿ ಮೆಟ್ರೋ ನಿಲ್ದಾಣಗಳು, ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭಾರಿ ಭದ್ರತೆಯನ್ನು ಒದಗಿಸಲಾಗಿದೆ.