ಕ್ರಿ.ಶ. 1336ರ ಏಪ್ರಿಲ್ 18 ಪವಿತ್ರ ತುಂಗಭದ್ರಾ ನದಿ ತೀರದಲ್ಲಿ ಕನ್ನಡ ಸಾಮ್ರಾಜ್ಯ ವಿಜಯನಗರ ಸ್ಥಾಪನೆಯಾಗಿದ್ದು, ಇತಿಹಾಸ ಮರೆಯಲಾಗದ ಒಂದು ಸುದಿನ. ಶ್ರೀವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹಕ್ಕ -ಬುಕ್ಕರು ಕಟ್ಟಿದ ವಿಜಯನಗರ ಎಂಬ ಪುಟ್ಟ ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ದೊಡ್ಡ ಸಾಮ್ರಾಜ್ಯವಾಗಿ ಮೆರೆಯಿತು.
ಕೃಷ್ಣಾನದಿಯಿಂದ ಕನ್ಯಾಕುಮಾರಿಯವರೆಗೂ ವಿಜಯನಗರ ಸಾಮ್ರಾಜ್ಯ ಹಬ್ಬಿತ್ತು. ಸುಮಾರು 500 ವರ್ಷಗಳ ಹಿಂದೆ ಮುತ್ತು ರತ್ನ, ವಜ್ರ, ವಜ್ರವೈಢೂರ್ಯಗಳನ್ನು ರಸ್ತೆಬದಿಯಲ್ಲಿ ಹಾಕಿ ಮಾರುತ್ತಿದ್ದ ಈ ಸಾಮ್ರಾಜ್ಯ ಕರ್ನಾಟಕದ ನಾಗರಿಕತೆಯನ್ನು, ಶ್ರೀಮಂತಿಕೆಯನ್ನು, ಕಲಾ ವೈಭವವನ್ನು ಸಾರಿ ಹೇಳುತ್ತಿದೆ.
ವಿದೇಶೀ ಯಾತ್ರಿಕರು ಮುಕ್ತಕಂಠದಿಂದ ವಿಜಯನಗರ ಸಾಮ್ರಾಜ್ಯವನ್ನು ಪ್ರಶಂಸೆ ಮಾಡಿದ್ದಾರೆ. 500 ವರ್ಷಗಳ ಹಿಂದೆ ಮುಸಲ್ಮಾನ ದೊರೆಗಳ ದಾಳಿಗೆ ಗುರಿಯಾದ ವೈಭವೋಪೇತ ಹಂಪೆ ಹಾಳು ಹಂಪೆಯೆಂದೇ ಹೆಸರಾಯಿತು. ಆದರೂ ಹಾಳು ಹಂಪೆಯಲ್ಲಿ ಪಾಳು ಬಿದ್ದ ದೇವಾಲಯಗಳು, ಒಡೆದುಹೋದ ವಿಗ್ರಹಗಳು ಮುಸಲ್ಮಾನ ದೊರೆಗಳ ದಾಳಿಗೆ ಮೂಕಸಾಕ್ಷಿಯಾಗಿ ನಿಂತಿವೆ. ತುಂಗಭದ್ರಾ ನದಿಯ ದಂಡೆಯ ಮೇಲೆ ಈ ಸುಂದರ ತಾಣ ಹಂಪೆ ನೆಲೆಗೊಂಡಿದೆ.
ಈ ನಾಡು ಶ್ರೀಮಂತಿಕೆಯಿಂದ, ಕಲಾ ವೈಭವದಿಂದ ಪ್ರಖ್ಯಾತಿ ಗಳಿಸಿದ್ದು ಕೃಷ್ಣದೇವರಾಯರ ಆಳ್ವಿಕೆಯಲ್ಲಿ. ಕೃಷ್ಣದೇವರಾಯ ಈ ಸಾಮ್ರಾಜ್ಯವನ್ನು ಎಲ್ಲಾ ದಿಕ್ಕುಗಳಿಗೆ ವಿಸ್ತರಿಸಿ, ಸಂಪದಿಭಿವೃದ್ಧಿಗೊಳಿಸಿ ವಿಜಯನಗರ ಸಾಮ್ರಾಜ್ಯದ ಹೆಸರು ಅಜರಾಮರವಾಗಿ ಉಳಿಯುವಂತೆ ಮಾಡಿದ. ಇಂದು ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹಂಪೆಯಲ್ಲಿ ತುಂಗಭದ್ರಾನದಿ, ಸಾಸಿವೆ ಕಾಳು ಗಣಪ, ವಿರೂಪಾಕ್ಷ ದೇವಾಲಯ ಪ್ರಸಿದ್ಧ ಯಾತ್ರಾಸ್ಥಳವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.