ಸ್ಪ್ರೌಟ್ಸ್ ಅಥವಾ ಮೊಳಕೆಕಾಳು ಆರೋಗ್ಯಕ್ಕೆ ಉತ್ತಮವಾದದ್ದು. ದಪ್ಪಗಾಗಿದ್ದೀನಿ, ಬೊಜ್ಜುಬಂದಿದೆ ಎಂದು ಬೆಳಗ್ಗಿನ ತಿಂಡಿ ಬಿಡುವ ಬದಲು ಈ ಸ್ಪ್ರೌಟ್ ಸಲಾಡ್ ನ್ನು ಸೇವಿಸಿ. ಇದರಿಂದ ನಿಮ್ಮ ಆರೋಗ್ಯವನ್ನು ವೃದ್ದಿಸಿಕೊಳಬಹುದು ಜೊತೆಗೆ ದೇಹವನ್ನು ಸಣ್ಣಗಾಗಿಸಿಕೊಳ್ಳಬಹುದು.
ಮೊಳಕೆಕಾಳುಗಳ ಸೇವನೆ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಹಜವಾಗಿಸಿ ಟೈಪ್ 2 ಡಯಾಬಿಟಿಸ್ ಅಪಾಯವನ್ನು ತಪ್ಪಿಸುತ್ತದೆ.
ಸ್ಪ್ರೌಟ್ಸ್ ಸಲಾಡ್: ಬೇಕಾಗುವ ಸಾಮಗ್ರಿಗಳು:
ಮೊಳಕೆ ಬರಿಸಿದ ಕಾಳುಗಳು-1 1/2ಕಪ್
ಆಪಲ್ ಟೊಮೋಟೊ-1ಕಪ್
ಹೆಚ್ಚಿದ ಸೌತೆಕಾಯಿ-1ಕಪ್
ಹೆಚ್ಚಿದ ಈರುಳ್ಳಿ-ಸ್ವಲ್ಪ(ಬೇಕಿದ್ದರೆ ಮಾತ್ರ)
ಕತ್ತರಿಸಿದ ಕರಿಬೇವು-ಒಂದು ಎಸಳು
ಕಾಳು ಮೆಣಸು-1/2 ಟೇಬಲ್ ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ಹುರಿದ ಜೀರಿಗೆ-1 ಚಮಚ,
ನಿಂಬೆ ರಸ-1 ಚಮಚ,
ಗಟ್ಟಿ ಮೊಸರು-2 ಎರಡು ಟೇಬಲ್ ಚಮಚ ,
ಹಸಿ ಶುಂಠಿ ಪೇಸ್ಟ್- 1 ಚಮಚ,
ಹೆಚ್ಚಿದ ಕೊತ್ತಂಬರಿಸೊಪ್ಪು-ಸ್ವಲ್ಪ
ಮಾಡುವ ವಿಧಾನ:
ಒಂದು ಪಾತ್ರೆಗೆ ಮೊಳಕೆ ಕಾಳುಗಳು, ಉಪ್ಪು, ಸ್ವಲ್ಪ ನೀರು ಹಾಕಿ ಮೊಳಕೆಕಾಳು, ಆಪಲ್ ಟೊಮೆಟೊಗಳನ್ನು ಹಾಫ್ ಬಾಯಿಲ್ ಮಾಡಿ. ನಂತರ ಮೊಳಕೆಕಾಳುಗಳು ತಣ್ಣಗಾಗಲು ಬಿಡಿ.
ಈಗ ಒಂದು ಬೌಲ್ ನಲ್ಲಿ ಗಟ್ಟಿಮೊಸರು, ಶುಂಠಿ ಪೇಸ್ಟ್, ಕತ್ತರಿಸಿದ ಕರಿ ಬೇವು, ಜೀರಿಗೆ, ಮೆಣಸಿನ ಪುಡಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಅದಕ್ಕೆ ತಣ್ಣಗಾದ ಮೊಳಕೆಕಾಳು-ಆಪಲ್ ಟೊಮೆಟೊ, ಹೆಚ್ಚಿದ ಸೌತೆಕಾಯಿ, ಈರುಳ್ಳಿ ಸೇರಿಸಿ ಸ್ವಲ್ಪ ನಿಂಬೆರಸ ಸೇರಿಸಿ ಚೆನ್ನಾಗಿ ತಿರುಗಿಸಿ. ಈಗ ಸಲಾಡ್ ಮಿಶ್ರಣವನ್ನು ಸರ್ವಿಂಗ್ ಬೌಲ್ ಗೆ ಹಾಕಿ ಅದರ ಮೇಲೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಸ್ಪ್ರೌಟ್ಸ್ ಸಲಾಡ್ ರೆಡಿ.