ಮಲಾಯ್ ಕೋಫ್ತಾ ಒಂದು ಉತ್ತರ ಭಾರತದ ರೆಸಿಪಿಯಾಗಿದೆ. ಇದನ್ನು ಆಲೂಗಡ್ಡೆ ಮತ್ತು ಪನ್ನೀರ್‌ನಿಂದ ಕೋಫ್ತಾವನ್ನು ತಯಾರಿಸಿ ಮಸಾಲೆಯೊಂದಿಗೆ ಸೇರಿಸುವುದರಿಂದ ಮಲಾಯ್ ಕೋಫ್ತಾ ಎಂದು ಕರೆಯುತ್ತಾರೆ. ಇದನ್ನು ತಯಾರಿಸಲು ಹಲವು ಸಾಮಗ್ರಿಗಳು ಮತ್ತು ಸಮಯದ ಅಗತ್ಯವಿದೆ. ಅಪರೂಪಕ್ಕೊಮ್ಮೆ ಏನಾದರೂ ವಿಶೇಷ ಅಡುಗೆಯನ್ನು ಪ್ರಯತ್ನಿಸುವವರಿಗೆ ಇದು ಉತ್ತಮವಾದ ರೆಸಿಪಿಯಾಗಿದೆ. ಇದನ್ನು ತಯಾರಿಸುವ ವಿಧಾನಕ್ಕಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಶುಂಠಿ - 1 ಇಂಚು
ಬೆಳ್ಳುಳ್ಳಿ - 7-8 ಎಸಳು
ಏಲಕ್ಕಿ - 1-2
ಗೋಡಂಬಿ - 8-10
ಒಣದ್ರಾಕ್ಷಿ - ಸ್ವಲ್ಪ
ಈರುಳ್ಳಿ - 2-3
ಟೊಮೆಟೋ - 2-3
ತೆಂಗಿನಕಾಯಿ ತುರಿ - 1/4 ಕಪ್
ತುರಿದ ಪನ್ನೀರ್ - 1 ಕಪ್
ಬೇಯಿಸಿದ ಬಟಾಟೆ - 2
ಹಸಿಮೆಣಸು - 2
ಕೊತ್ತಂಬರಿ ಸೊಪ್ಪು - ಸ್ವಲ್ಪ
ಅಚ್ಚಖಾರದ ಪುಡಿ - 2-3 ಚಮಚ
ಗರಂಮಸಾಲಾ - 2 ಚಮಚ
ಉಪ್ಪು - ರುಚಿಗೆ
ಜೋಳದ ಹಿಟ್ಟು - 2 ಚಮಚ
ಎಣ್ಣೆ - ಕರಿಯಲು
ದನಿಯಾ ಪುಡಿ - 2 ಚಮಚ
ಟೊಮೆಟೋ ಕೆಚ್‌ಅಪ್ - 1 ಚಮಚ
ಸಕ್ಕರೆ - 1 ಚಮಚ
ಕಸೂರಿ ಮೇತಿ - 1 ಚಮಚ
ಫ್ರೆಶ್ ಕ್ರೀಂ - 2-3 ಚಮಚ
ಮೈದಾ ಹಿಟ್ಟು - ಸ್ವಲ್ಪ
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ 2 ಕಪ್ ನೀರು, ಶುಂಠಿ, ಬೆಳ್ಳುಳ್ಳಿ, ಏಲಕ್ಕಿ, 5-6 ಗೋಡಂಬಿ, ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೋವನ್ನು ಹಾಕಿ 10-15 ನಿಮಿಷ ಬೇಯಿಸಿ. ಸ್ವಲ್ಪ ಆರಿದ ನಂತರ ಅದನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಈಗ ಒಂದು ಬೌಲ್‌ಗೆ ತುರಿದ ಪನ್ನೀರ್, 2 ಸ್ಮ್ಯಾಶ್ ಮಾಡಿದ ಬೇಯಿಸಿದ ಬಟಾಟೆ, ಚಿಕ್ಕದಾಗಿ ಹೆಚ್ಚಿದ 2 ಹಸಿಮೆಣಸು ಮತ್ತು 2-3 ಚಮಚ ಕೊತ್ತಂಬರಿ ಸೊಪ್ಪು, 1 ಚಮಚ ಅಚ್ಚಖಾರದ ಪುಡಿ, 1 ಚಮಚ ಗರಂಮಸಾಲಾ, 1 ಚಮಚ ಉಪ್ಪು ಮತ್ತು 2 ಚಮಚ ಜೋಳದ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೈಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ಅದರೊಳಗೆ ಗೋಡಂಬಿ ಚೂರುಗಳು ಮತ್ತು ಒಣದ್ರಾಕ್ಷಿಯನ್ನು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ನಂತರ ಈ ಉಂಡೆಗಳನ್ನು ಮೈದಾ ಹಿಟ್ಟಿನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಕೆಂಪಾಗುವಂತೆ ಕರಿಯಿರಿ.
ಒಂದು ಪ್ಯಾನ್‌ನಲ್ಲಿ 2-3 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದಾಗ 2 ಚಮಚ ಅಚ್ಚಖಾರದ ಪುಡಿ, 2 ಚಮಚ ದನಿಯಾ ಪುಡಿ, 1 ಚಮಚ ಗರಂಮಸಾಲಾವನ್ನು ಹಾಕಿ ಸಣ್ಣ ಉರಿಯಲ್ಲಿ ಮಿಕ್ಸ್ ಮಾಡಿ. ಈಗ ಅದಕ್ಕೆ ಈಗಾಗಲೇ ರುಬ್ಬಿಟ್ಟುಕೊಂಡಿರುವ ಮಿಶ್ರಣವನ್ನು ಸೇರಿಸಿ ಮಿಕ್ಸ್ ಮಾಡಿ 5-10 ನಿಮಿಷ ಮುಚ್ಚಿಟ್ಟು ಕುದಿಸಿ. ನಂತರ ಅದಕ್ಕೆ 1 ಚಮಚ ಉಪ್ಪು ಮತ್ತು ಟೊಮೆಟೋ ಕೆಚ್‌ಅಪ್ ಅನ್ನು ಸೇರಿಸಿ ಮಿಕ್ಸ್ ಮಾಡಿ. ಸಕ್ಕರೆ, ಕಸೂರಿ ಮೇತಿ ಮತ್ತು 2 ಚಮಚ ಫ್ರೆಶ್ ಕ್ರೀಂ ಅನ್ನು ಸೇರಿಸಿ ಅದನ್ನು ಒಂದು ಬೌಲ್‌ನಲ್ಲಿ ಹಾಕಿ. ಈಗ ಮಸಾಲಾ ರೆಡಿಯಾಗಿದ್ದು ಇದರಲ್ಲಿ ಕರಿದಿಟ್ಟ ಉಂಡೆಗಳನ್ನು ಹಾಕಿ ಅದರ ಮೇಲೆ ಫ್ರೆಶ್ ಕ್ರೀಂ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಲಾಯ್ ಕೋಫ್ತಾ ಸವಿಯಲು ಸಿದ್ಧ.
ರೋಟಿ, ಚಪಾತಿ ಅಥವಾ ಪರೋಟಾ ಜೊತೆಗೆ ಇದು ಉತ್ತಮವಾಗಿರುತ್ತದೆ. ಅನ್ನದ ಜೊತೆಗೂ ಸಹ ನೀವು ಇದನ್ನು ಪ್ರಯತ್ನಿಸಬಹುದಾಗಿದೆ.