ಸಾಮಾನ್ಯವಾಗಿ ಎಲ್ಲರೂ ಊಟದ ಜೊತೆಗೆ ಉಪ್ಪಿನಕಾಯಿಯನ್ನು ಬಳಸೇ ಬಳಸುತ್ತಾರೆ. ಉಪ್ಪಿನಕಾಯಿ ಇಷ್ಟವಿಲ್ಲದಿರುವವರು ಸಿಗುವುದೇ ಕಷ್ಟ. ಹಲವು ರೀತಿಯ, ಹಲವು ತರಕಾರಿಗಳನ್ನು ಬಳಸಿ ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ. ಆದರೆ ಹೆಚ್ಚು ಪ್ರಚಲಿತದಲ್ಲಿರುವುದು ಮಾವಿನಕಾಯಿ ಮತ್ತು ನಿಂಬೆಹಣ್ಣಿನ ಉಪ್ಪಿನಕಾಯಿಗಳಾಗಿವೆ. ನಿಂಬೆಹಣ್ಣಿನಿಂದ ಮಾಡುವ ಸಿಹಿ ಉಪ್ಪಿನಕಾಯಿಯ ಬಗ್ಗೆ ಕೇಳಿರುವಿರಾ? ಇಲ್ಲವೆಂದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ ಹುಳಿ-ಸಿಹಿ ಮಿಶ್ರಿತ ಉಪ್ಪಿನಕಾಯಿಯನ್ನು ತಯಾರಿಸಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು:
ನಿಂಬೆಹಣ್ಣು - 10-15
ಕಲ್ಲುಪ್ಪು - ಸ್ವಲ್ಪ
ಸಾಸಿವೆ - 1 ಚಮಚ
ಜೀರಿಗೆ - 1 ಚಮಚ
ಮೆಂತೆ - 1/2 ಚಮಚ
ಎಣ್ಣೆ - ಸ್ವಲ್ಪ
ಕೆಂಪು ಮೆಣಸು - 8-10
ತುರಿದ ಬೆಲ್ಲ - 1/2 ಕಪ್
ಮಾಡುವ ವಿಧಾನ:
ನಿಂಬೆ ಹಣ್ಣುಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ನಂತರ ಅವುಗಳನ್ನು ಚಿಕ್ಕ ಹೋಳುಗಳಾಗಿ ಕತ್ತರಿಸಿ ಒಂದು ಭರಣಿಯಲ್ಲಿ 2-3 ಚಮಚ ಕಲ್ಲುಪ್ಪನ್ನು ಬೆರೆಸಿ ಸರಿಯಾಗಿ ಮುಚ್ಚಿ 10 ರಿಂದ 15 ದಿನಗಳವರೆಗೆ ಬಿಡಿ. ಹೀಗೆ ಮಾಡಿದಾಗ 10 ದಿನಗಳ ನಂತರ ನಿಂಬೆ ಹಣ್ಣು ಸ್ವಲ್ಪ ಮೆದುವಾಗಿ ಉಪ್ಪಿನಕಾಯಿ ಮಾಡಲು ಸಿದ್ಧವಾಗಿರುತ್ತದೆ.
ಒಂದು ಪಾತ್ರೆಗೆ 2 ಕಪ್ ನೀರು ಮತ್ತು 1/2 ಕಪ್ ಉಪ್ಪನ್ನು ಹಾಕಿ 10-15 ನಿಮಿಷ ಚೆನ್ನಾಗಿ ಕುದಿಸಿಟ್ಟುಕೊಳ್ಳಿ. ಒಂದು ಬಾಣಲೆಗೆ ಸಾಸಿವೆ, ಮೆಂತೆ ಮತ್ತು ಜೀರಿಗೆಯನ್ನು ಹಾಕಿ ಚಿಕ್ಕ ಉರಿಯಲ್ಲಿ 2-3 ನಿಮಿಷ ಹುರಿದಿಡಿ. ನಂತರ ಅದೇ ಬಾಣೆಲೆಗೆ 2 ಚಮಚ ಎಣ್ಣೆಯನ್ನು ಹಾಕಿ ಕೆಂಪು ಮೆಣಸನ್ನು ಹುರಿದಿಟ್ಟುಕೊಳ್ಳಿ. ಈಗ ಒಂದು ಪಾತ್ರೆಗೆ ತುರಿದಿಟ್ಟ ಬೆಲ್ಲ ಮತ್ತು 1/4 ಕಪ್ ನೀರನ್ನು ಹಾಕಿ ಬೆಲ್ಲವು ಕರಗುವವರೆಗೆ ಕುದಿಸಿ ಆರಲು ಬಿಡಿ. ನಂತರ ಈಗಾಗಲೇ ಹುರಿದಿಟ್ಟುಕೊಂಡ ಮಸಾಲೆ ಮತ್ತು ಕೆಂಪು ಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಸ್ವಲ್ಪವೇ ಉಪ್ಪು ನೀರನ್ನು ಸೇರಿಸಿಕೊಂಡು ನುಣ್ಣಗೆ ರುಬ್ಬಿರಿ. ಈಗ ಉಪ್ಪಿನಲ್ಲಿ ನೆನೆಸಿಟ್ಟ ನಿಂಬೆಹಣ್ಣಿಗೆ ಈ ಮಸಾಲೆ ಮತ್ತು ಬೆಲ್ಲದ ಪಾಕವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಹುಳಿ-ಸಿಹಿ-ಖಾರವಾಗಿರುವ ರುಚಿಯಾದ ನಿಂಬೆಹಣ್ಣಿನ ಉಪ್ಪಿನಕಾಯಿ ಸಿದ್ದವಾಗುತ್ತದೆ.