ಜೈಪುರ: ಲೋಕಸಭೆ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ದೇಶಕ್ಕೆ ಅತೀ ದೊಡ್ಡ ಸಮಸ್ಯೆ. ಕರ್ಫ್ಯೂ ಹೇರಿಕೆ ಮಾಡುವುದು ಅವರ ಡಿಎನ್ ಎನಲ್ಲೇ ಇದೆ. ಬಡವರನ್ನು ಹಸಿವಿಗೆ ನೂಕಿ, ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಸಾಕುತ್ತದೆ ಎಂದು ರಾಜಸ್ಥಾನದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಯೋಗಿ ವಾಗ್ದಾಳಿ ನಡೆಸಿದ್ದಾರೆ.
ರಾಮನಿಗೆ ದೇವಾಲಯ ಕಟ್ಟಿಸುವುದು ಬಿಡಿ, ಕಾಂಗ್ರೆಸ್ ಪ್ರಕಾರ ರಾಮ ಮತ್ತು ಕೃಷ್ಣ ಕಾಲ್ಪನಿಕ ಪಾತ್ರಗಳು. ಕಾಂಗ್ರೆಸ್ ಆಳ್ವಿಕೆಯಲ್ಲಿ ಬಡವರ ರಕ್ತ ಹೀರುವುದೇ ಕೆಲಸವಾಗಿತ್ತು ಎಂದು ಯೋಗಿ ಹೇಳಿದ್ದಾರೆ. ಮೋದಿ ಆಡಳಿತದಲ್ಲಿ ಕಳೆದ 10 ವರ್ಷಗಳಲ್ಲಿ ದೇಶದ ಗಡಿ ಭಾಗ ಸುರಕ್ಷಿತವಾಗಿದೆ. ಇದಕ್ಕೆ ಮೊದಲು ದೇಶದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿತ್ತು. ಮೂರು ದಿನಗಳ ಹಿಂದೆ ಬ್ರಿಟಿಷ್ ಮಾಧ‍್ಯಮದಲ್ಲಿ ಪಾಕಿಸ್ತಾನದಲ್ಲಿ 20 ಭಯೋತ್ಪಾದಕರು ಸತ್ತ ಸುದ್ದಿ ಬಂದಿತ್ತು. ಇದು ನವ ಭಾರತ. ಈಗ ಭಯೋತ್ಪಾದಕರು ತಮ್ಮ ದಿನಗಳನ್ನು ಎಣಿಸುತ್ತಿದ್ದಾರೆ ಎಂದು ಯೋಗಿ ಹೇಳಿದ್ದಾರೆ.
ಈಗ ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರವನ್ನು ತರಬೇಕಿದೆ ಎಂದು ಯೋಗಿ ಕರೆ ಕೊಟ್ಟಿದ್ದಾರೆ. ಈಗ ಯಾರಿಗೂ ಭಾರತ ವಿರುದ್ಧ ಕೆಲಸ ಮಾಡಲು ಧೈರ್ಯವಿಲ್ಲ, ಏರ್ ಸ್ಟ್ರೈಕ್ ಆಗುವ ಭಯವಿದೆ ಎಂದು ಪಾಕಿಸ್ತಾನವನ್ನುದ್ದೇಶಿಸಿ ಯೋಗಿ ಹೇಳಿದ್ದಾರೆ.