ಕಾಶ್ಮಿರದಲ್ಲಿ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಿರಿಯ ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ನೇತೃತ್ವದ ನಿಯೋಗ ಪಾಕಿಸ್ತಾನದ ಪರವಾಗಿರುವ ಪ್ರತ್ಯೇಕತಾವಾದಿ ನಾಯಕ ಹುರಿಯತ್ ನಾಯಕ ಸಯೀದ್ ಅಲಿ ಶಾ ಗಿಲಾನಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.
ಗಿಲಾನಿಯವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿನ್ಹಾ, ಯಾವುದೇ ನಿಯೋಗದ ಭಾಗವಾಗಿ ನಾವು ಇಲ್ಲಿಗೆ ಆಗಮಿಸಿಲ್ಲ. ಕಾಶ್ಮಿರದ ಜನತೆಯ ನೋವು ಅರ್ಥ ಮಾಡಿಕೊಂಡು ಸಮಸ್ಯೆಯನ್ನು ಮಾನವೀಯತೆಯ ಆಧಾರದ ಮೇಲೆ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ.ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ ಎನ್ನುವ ಆಶಾಭಾವನೆಯಿದೆ ಎಂದು ತಿಳಿಸಿದ್ದಾರೆ.
ಭಾರತದ ಮಾಜಿ ವಾರ್ತಾ ಆಯುಕ್ತ ವಜಾಹತ್ ಹಬೀಬುಲ್ಲಾ ಕೂಡಾ ಸಿನ್ಹಾ ಅವರ ನಿಯೋಗದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಕಳೆದ ಸೆಪ್ಟೆಂಬರ್ 4 ರಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಾಶ್ಮಿರ ವಿಷಯ ಕುರಿತಂತೆ ಚರ್ಚಿಸಲು ನೀಡಿದ ಆಹ್ವಾನವನ್ನು ಪ್ರತ್ಯೇಕತಾವಾದಿ ನಾಯಕರಾದ ಗಿಲಾನಿ ಮತ್ತು ಮಿರ್ವೈಜ್ ಉಮರ್ ಫಾರೂಕ್ ತಿರಸ್ಕರಿಸಿದ್ದರು.
ಕಳೆದ ಜುಲೈ ತಿಂಗಳಲ್ಲಿ ಬುರ್ಹಾನ್ ವನಿ ಹತ್ಯೆಯ ನಂತರ ಕಾಶ್ಮಿರ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಏತನ್ಮಧ್ಯೆ, ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಪ್ರತ್ಯೇಕತಾವಾದಿ ನಾಯಕರನ್ನು ಭೇಟಿ ಮಾಡಿರುವುದರಲ್ಲಿ ಕೇಂದ್ರ ಸರಕಾರದ ಕೈವಾಡವಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಬಿಜೆಪಿ ಹೈಕಮಾಂಡ್ ಮತ್ತು ಕೇಂದ್ರ ಸರಕಾರದ ಆದೇಶವಿಲ್ಲದೇ ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಪ್ರತ್ಯೇಕತಾವಾದಿ ನಾಯಕರನ್ನು ಭೇಟಿ ಮಾಡಲು ಹೇಗೆ ಸಾಧ್ಯ. ಇದರ ಹಿಂದೆ ಕೇಂದ್ರ ಸರಕಾರದ ಕುಮ್ಮಕ್ಕಿದೆ. ಮೋದಿ ಸರಕಾರ ಪ್ರತ್ಯೇಕತಾವಾದಿಗಳಿಗೆ ಮಣಿದಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ