ಖಾಸಗಿ ಕಂಪನಿಯಲ್ಲಿ ತಿಂಗಳಿಗೆ 5,000 ಸಂಬಳದಲ್ಲಿ ದುಡಿಯುವ ಮಹಿಳೆಯೋರ್ವಳು ತನ್ನ ಜನ್ ಧನ್ ಖಾತೆಯಲ್ಲಿ ಏಕಾಏಕಿ 1ಕೋಟಿ ನೋಡಿ ಹೌಹಾರಿ ಹೋಗಿದ್ದಾಳೆ. ಘಾಜಿಯಾಬಾದ್‌ನಲ್ಲಿ ಈ ಪ್ರಸಂಗ ನಡೆದಿದೆ.
ಈ ಕುರಿತು ಆಕೆ ಎಷ್ಟು ಬಾರಿ ದೂರು ನೀಡಿದರೂ ಬ್ಯಾಂಕ್ ಅಧಿಕಾರಿಗಳು ಇನ್ನೊಂದು ದಿನ ಬಾ ಎಂದು ಹಿಂದಕ್ಕೆ ಕಳುಹಿಸುತ್ತಿದ್ದು ಮತ್ತೀಗ ಆಕೆ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಘಟನೆ ವಿವರ: ಘಾಜಿಯಾಬಾದ್ ನಿವಾಸಿಯಾದ ಶೀತಲ್ ಯಾದವ್ ಶಾರದಾ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಜನ್ ಧನ್ ಖಾತೆಯನ್ನು ಹೊಂದಿದ್ದಳು. ಡಿಸೆಂಬರ್ 18 ರಂದು ಆಕೆ ತನ್ನ ಮನೆಯ ಹತ್ತಿರವಿದ್ದ ಐಸಿಐಸಿಐ ಬ್ಯಾಂಕ್ ಎಟಿಎಂ ಒಂದರಿಂದ ಹಣವನ್ನು ಡ್ರಾ ಮಾಡಲು ಹೋದಾಗ ಆವಾಕ್ಕಾಗಿ ಹೋಗಿದ್ದಾಳೆ. ಆಕೆಯ ಖಾತೆಯಲ್ಲಿ ಬರೊಬ್ಬರಿ 99,99,99,394 ಹಣ ಜಮಾ ಆಗಿತ್ತು.
ತನ್ನ ಕಣ್ಣನ್ನು ತಾನು ನಂಬದಾದ ಆಕೆ ತನ್ನ ಹಿಂದೆ ನಿಂತಿದ್ದ ವ್ಯಕ್ತಿ ಬಳಿ ಅದನ್ನು ಪರೀಕ್ಷಿಸಲು ಹೇಳಿದ್ದಾಳೆ. ಆತನು ಸಹ 99,99,99,394 ಹಣವಿರುವುದನ್ನು ಖಚಿತಪಡಿಸಿದಾಗ ಅಲ್ಲೇ ಹತ್ತಿರದಲ್ಲಿದ್ದ ಯಸ್ ಬ್ಯಾಂಕ್‌ನಲ್ಲಾಕೆ ಮತ್ತೊಮ್ಮೆ ಪರೀಕ್ಷಿಸಿದ್ದಾಳೆ.
ಆಗಲೂ ಅದೇ ಮೊತ್ತ ಕಾಣಿಸಿದಾಗ ಬ್ಯಾಂಕ್‌ಗೆ ಹೋಗಿ ದೂರು ನೀಡಿದ್ದಾಳೆ. ಆದರೆ ಇಂದು ಬಾ, ನಾಳೆ ಬಾ ಎಂದು ಬ್ಯಾಂಕ್ ಅಧಿಕಾರಿಗಳು ಆಕೆಯನ್ನು ಸಾಗ ಹಾಕಿದ್ದಾರೆ.
ಸ್ಥಲೀಯ ಬ್ಯಾಂಕ್ ಸಿಬ್ಬಂದಿಗಳ ಈ ಅಸಡ್ಡೆಯಿಂದ ಹತಾಶಳಾದ ಆಕೆ ಮತ್ತು ಪತಿ ಜಿಲೆಂದರ್ ಸಿಂಗ್ ಈ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.