ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್ಟರ್ನಲ್ಲಿ ಫಾಲೋ ಮಾಡಿದ ಬೆನ್ನಲ್ಲೇ ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಮೋದಿ ಅವರನ್ನು ಫಾಲೋ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಮಸ್ಕ್ ಬಳಿ ನೆಟ್ಟಿಗರು ಭಾರತದಲ್ಲಿ ಇನ್ನೂ ಯಾಕೆ ಟೆಸ್ಲಾ ಕಾರು ಬಂದಿಲ್ಲ? ಕಾರು ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು.
2020ರ ಅಕ್ಟೋಬರ್ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿರುವ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ.