ರಾಜ್ಯದ ಅನೇಕ ಭಾಗಗಳಲ್ಲಿ ಭೀಕರ ಬರಗಾಲ ಆವರಿಸಿದ್ದು, ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯಕ್ಕೂ ಬರದ ಬಿಸಿ ತಟ್ಟಿದೆ. ದೇಗುಲದ ತೀರ್ಥಬಾವಿ ನೀರಿಲ್ಲದೆ ಬತ್ತಿ ಹೋಗಿದ್ದು ದೇವರ ತೀರ್ಥಕ್ಕೂ ನೀರಿನ ಕೊರತೆ ಎದುರಾಗಿದೆ.
ಭಕ್ತರಿಗೆ ತೀರ್ಥ ಕೊಡಲು ಸಹ ನೀರಿಲ್ಲದಿರುವುದರಿಂದ ಪರಿಹಾರಕ್ಕಾಗಿ ಆಡಳಿತ ಮಂಡಳಿ ಜ್ಯೋತಿಷಿಗಳ ಮೊರೆ ಹೋಗಿದ್ದರು. ತಾಂಬೂಲ ಶಾಸ್ತ್ರದ ಮೂಲಕ ಪ್ರಶ್ನೆಯನ್ನಿಟ್ಟಾಗ ದೇಗುಲದಿಂದ ಸ್ವಲ್ಪ ದೂರದಲ್ಲಿರುವ ದರ್ಪಣತೀರ್ಥ ಹೊಳೆಯಿಂದ ನೀರು ಪಡೆದುಕೊಂಡು ತೀರ್ಥವಾಗಿ ನೀಡಲು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.
ದೇವಸ್ಥಾನದ ಹಿಂದಿನ ಗುಡ್ಡದ ಬಳಿ ಇರುವ ದರ್ಪಣತೀರ್ಥ ಹೊಳೆಯ ಪಕ್ಕ ಹೊಂಡ ತೆಗೆದು, ಅದರಲ್ಲಿ ಸೋಸಿದ ನೀರನ್ನು ದೇವಸ್ಥಾನಕ್ಕೆ ಪೂರೈಸಲಾಗುವುದು ಎಂದು ತಿಳಿದು ಬಂದಿದೆ. ಆ ನೀರನ್ನು ವೈದಿಕ ವಿಧಾನದ ಮೂಲಕ ಶುದ್ಧೀಕರಿಸಿ ತೀರ್ಥಕ್ಕೆ ಉಪಯೋಗಿಸಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.