ಶಬರಿಮಲೆ: ಕೇರಳದ ವಕ್ಫ್ ಸಚಿವ ಡಾ. ಕೆ.ಟಿ. ಜಲೀಲ್ ಶನಿವಾರ ಮಧ್ಯರಾತ್ರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ಕೋಮು ಸೌಹಾರ್ದತೆ ಮೆರೆದಿದ್ದಾರೆ.
ಅಯ್ಯಪ್ಪ ದರ್ಶನ ಮಾಡಿಕೊಂಡು ಬಂದಿರುವ ಕುರಿತು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ದೇವಸ್ಥಾನದಲ್ಲಿ ತೀರ್ಥ ಸ್ವೀಕರಿಸುತ್ತಿರುವ ಹಾಗೂ ದೇಗುಲದಲ್ಲಿರುವ ಪೂರೋಹಿತರ ಜೊತೆ ಮಾತುಕತೆ ನಡೆಸುತ್ತಿರುವ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಮುಸ್ಲಿಂ ಸಚಿವರೊಬ್ಬರು ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಿದ್ದಾಗಿದ್ದು, ಆ ಮೂಲಕ ಅಯ್ಯಪ್ಪನ ದರ್ಶನಕ್ಕೆ ಯಾವುದೇ ಧರ್ಮಗಳ ತಡೆಗೋಡೆಯಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ವಕ್ಫ್ ಖಾತೆ ಜೊತೆಗೆ ಸ್ಥಳೀಯ ಸ್ವಯಂ ಆಡಳಿತ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ಖಾತೆಯನ್ನೂ ನಿಭಾಯಿಸುತ್ತಿರುವ ಜಲೀಲ್ ಧರ್ಮಗಳ ಕಿತ್ತಾಟದ ನಡುವೆ, ಹೊಸತನಕ್ಕೆ ನಾಂದಿ ಹಾಡಿದ್ದಾರೆ. ದೇವಸ್ವಂ ಮತ್ತು ವಿದ್ಯುತ್ ಮಂಡಳಿ ಸಚಿವ ಕಡಕ್ಕಂಪಳ್ಳಿ ಸುರೇಂದ್ರನ್ ಜತೆ ಜಲೀಲ್ ಅವರು ಭೇಟಿ ನೀಡಿ, ಪ್ರಸ್ತುತ ವರ್ಷದ ಶಬರಿಮಲೆ ಯಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಹಾಗೂ ದೇವಸ್ಥಾನದಲ್ಲಿ ಯಾವ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದರ ಕುರಿತು ದೇವಳದ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು.
`ಶನಿವಾರ ರಾತ್ರಿ 1.15ಕ್ಕೆ ಶಬರಿಮಲೆ ದೇವಸ್ಥಾನಕ್ಕೆ ತಲುಪಿದ್ದೆ. ಮುಂಜಾನೆದ್ದು ಸ್ನಾನಾದಿಗಳನ್ನು ಮುಗಿಸಿ ಅಯ್ಯಪ್ಪ ದರ್ಶನ ಮಾಡಲು ತೆರಳಿದೆ. ನಾನು ದೇವಾಲಯ ಪ್ರವೇಶಿಸುವಾಗ ಯಾರೊಬ್ಬರೂ ನನ್ನನ್ನು ತಡೆಯಲಿಲ್ಲ. ಅಯ್ಯಪ್ಪ ಸ್ವಾಮಿ ದರ್ಶನದ ನಂತರ ವಾವರ್ ಮಸೀದಿಗೂ ಭೇಟಿ ನೀಡಿದ್ದೆ. ಪಾವರ್ರು ಅಯ್ಯಪ್ಪ ಸ್ವಾಮಿಯ ಗೆಳೆಯರಾಗಿದ್ದರು. ಶತ ಶತಮಾನಗಳು ಕಳೆಯುತ್ತಿದ್ದರೂ ಅವರಿಬ್ಬರ ಸ್ನೇಹ ಶಾಶ್ವತವಾಗಿದೆ. ಅವರ ಸ್ನೇಹ ಎಲ್ಲರಿಗೂ ಮಾದರಿಯಾಗಲಿ. ಅಂತಹ ದಿನಗಳು ಮತ್ತೆ ಮತ್ತೆ ಮರಳಿ ಬರಲಿ ಎಂದು ಸಚಿವ ಡಾ. ಕೆ.ಟಿ. ಜಲೀಲ್ ತಮ, ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ