ಕೋಲ್ಕತ್ತಾ : ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಕೆಲದಿನಗಳ ಹಿಂದೆ ನಡೆದ ಹಿಂಸಾಚಾರ ಪ್ರಕರಣ ರಾಜ್ಯ ಸಭೆಯಲ್ಲಿ ಪ್ರತಿಧ್ವನಿಸಿದೆ.
ಪಶ್ಚಿಮ ಬಂಗಾಳ ರಾಜ್ಯ ಬದುಕಲು ಯೋಗ್ಯವಾಗಿಲ್ಲ. ಇದೊಂದು ಸಾಮೂಹಿಕ ಹತ್ಯಾ ಪ್ರಕರಣ ಎಂದು ಬಿಜೆಪಿ ಸಂಸದೆ ರೂಪಾ ಗಂಗೂಲಿ ಕಣ್ಣೀರಿಟ್ಟಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಮತ್ತು ಆರು ಮಂದಿ ಮಹಿಳೆಯರನ್ನು ಜೀವಂತ ಸುಟ್ಟ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು.
ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ರೂಪಾ ಗಂಗೂಲಿ, ಪಶ್ಚಿಮ ಬಂಗಾಳ ರಾಜ್ಯವು ಬದುಕಲು ಯೋಗ್ಯವಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಜನರು ಸರ್ಕಾರದ ವಿರುದ್ಧ ಮಾತನಾಡುವ ಹಾಗೆ ಇಲ್ಲ.
ಸರ್ಕಾರವು ಕೊಲೆಗಡುಕರನ್ನು ರಕ್ಷಿಸುತ್ತಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಸರ್ಕಾರವೊಂದು ಜನರನ್ನು ಸಾಯಿಸುವಂತಹ ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲಿ ಹೊರತು ಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ. ನಾವೆಲ್ಲರೂ ಮನುಷ್ಯ ಜೀವಿಗಳು. ನಾವು ಕಲ್ಲು ಹೃದಯದ ರಾಜಕಾರಣ ಮಾಡಲು ಸಾಧ್ಯವಿಲ್ಲ. ಅಲ್ಲಿ ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ.
ಅಲ್ಲಿನ ಜನರು ಊರುಗಳಿಂದ ಪರಾರಿಯಾಗುತ್ತಿದ್ದಾರೆ. ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಮನವಿ ಮಾಡಿಕೊಂಡು ಭಾವುಕರಾದರು. ಸಂಸದೆಯ ಈ ಹೇಳಿಕೆಯಿಂದ ರಾಜ್ಯಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು.