ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಎರಡು ವರ್ಷಗಳ ಅಧಿಕಾರವಧಿ ಪೂರ್ಣಗೊಳಿಸಿದೆ. ಪ್ರಧಾನ ಸೇವಕನಾಗಿ 125 ಕೋಟಿ ಜನತೆಯ ಸೇವೆ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಹರಣ್ಪುರ್ ಜಿಲ್ಲೆಯಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಕಳೆದ ಎರಡು ವರ್ಷಗಳ ಅಧಿಕಾರವಧಿಯ ಲೆಕ್ಕವನ್ನು ಕೊಡಲು ಬಂದಿದ್ದೇನೆ. ಎರಡು ವರ್ಷಗಳ ಹಿಂದೆ ನಾನು ಇದೇ ಸಮಯದಲ್ಲಿ ಪ್ರದಾನಿಯಾಗಿ ಅಧಿಕಾರ ಸ್ವಿಕರಿಸಿದ್ದೆ. ಪ್ರಧಾನ ಸೇವಕನಾಗಿ ದೇಶದ ಜನತೆಗೆ ನನ್ನಿಂದಾದ ಸೇವೆ ನೀಡಿದ್ದೇನೆ ಎಂದರು.
ಸರಕಾರಗಳು ಬರುತ್ತವೆ ಹೋಗುತ್ತವೆ. ಚುನಾವಣೆಗಳು ಬರುತ್ತವೆ ಹೋಗುತ್ತವೆ. ಆದರೆ, ಸರಕಾರ ಜನತೆಯ ಸೇವೆಗಾಗಿ ರಚಿಸಲಾಗುತ್ತದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಮ್ಮ ಕೆಲಸವನ್ನು ನೋಡಿದ್ದೀರಿ. ನಮ್ಮ ಸರಕಾರ ದೇಶದ ಬಡ ಜನತೆಗಾಗಿ ಅರ್ಪಿತವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರಗಳನ್ನು ಬಲಪಡಿಸಿದಲ್ಲಿ ಜನತೆಯ ಕ್ಷೇಮಾಭಿವೃದ್ಧಿಗೆ ನೆರವಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾನು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಕೇಂದ್ರದ ಬಳಿ ಶೇ.35 ರಷ್ಟು ಹಣವನ್ನಿಟ್ಟುಕೊಂಡು ಉಳಿದ ಹಣವನ್ನು ರಾಜ್ಯ ಸರಕಾರಗಳಿಗೆ ನೀಡಬೇಕು ಎನ್ನುವುದೇ ನನ್ನ ನಿಲುವಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಬದಲಾವಣೆಯಾಗುತ್ತಿದೆ. ಆದರೆ, ಕೆಲವರ ಮನಸ್ಥಿತಿ ಮಾತ್ರ ಬದಲಾಗುತ್ತಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದರು.
ನಮ್ಮ ಸರಕಾರ ಶಾಲೆಗಳು, ಆಸ್ಪತ್ರೆ, ರಸ್ತೆ ಸಂಪರ್ಕ ಮತ್ತು ಬಡವರ ಏಳಿಗೆ ಉದ್ದೇಶವನ್ನು ಹೊಂದಿದೆ. ನಮ್ಮ ಕಬ್ಬು ಬೆಳೆಗಾರರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು ಎನ್ನುವುದು ನಮ್ಮ ಬಯಕೆಯಾಗಿದೆ. ಒಂದು ವೇಳೆ ಸಕ್ಕರೆ ಕಾರ್ಖಾನೆಗಳನ್ನು ಪ್ರಾಮಾಣಿಕವಾಗಿ ನಡೆಸಿದಲ್ಲಿ ಯಾವೊಬ್ಬ ರೈತನ ಹಣ ಬಾಕಿ ಉಳಿಯುವುದಿಲ್ಲ. ರೈತರಿಗೆ ಅನ್ಯಾಯವಾಗಲು ನಮ್ಮ ಸರಕಾರ ಬಿಡುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದರು.
ವೆಬ್ದುನಿಯಾ ಮೊಬೈಲ್ ಆಪ್ (ಡೌನ್ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.