ಶ್ರೀನಗರ:ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪೂಂಛ್ ಸೆಕ್ಟರ್‌ನಲ್ಲಿ ಪಾಕ್ ಸೇನಾಪಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಪರಿಣಾಮ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮೂರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಲ್ ಒಸಿ ಬಳಿಯ ಗುಲ್ಪುರಾ ಬಳಿ ಈ ದಾಳಿ ನಡೆದಿದ್ದು, ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮೋರ್ಟಾರ್ ಶೆಲ್ ಗಳಿಂದ ಪಾಕ್ ಪಡೆ ದಾಳಿ ನಡೆಸಿದೆ. ದಾಳಿಯಲ್ಲಿ ಸ್ಥಳೀಯ ದಂಪತಿಗಳಿಬ್ಬರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಸೇನಾ ದಾಳಿಗೆ ಭಾರತೀಯ ಯೋಧರು ದಿಟ್ಟ ಉತ್ತರ ನೀಡುತ್ತಿದ್ದಾರೆ.
ಇನ್ನು ಬಂಡಿಪೋರಾ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿರುವ ಸೇನಾ ನೆಲೆಯ ಮೇಲೆ ಉಗ್ರೠ ಖೂಡ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಜ್‌ಬುಲ್ ಮುಜಾಹಿದೀನ್ ಕಮಾಂಡರ್, ಉಗ್ರ ಬುರ್ಹಾನ್ ವಾನಿಯ ಹತ್ಯೆಗೆ ಇಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಸಲು ಸಿದ್ಧತೆ ನಡೆಸಲಾಗಿದೆ. ಈ ಹಿನ್ನಲೆಯಲ್ಲಿ ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.