ದೇಶಾದ್ಯಂತ ತ್ರಿವಳಿ ತಲಾಕ್ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಮಧ್ಯೆ ತ್ರಿವಳಿ ತಲಾಕ್ ಸಂವಿಧಾನ ಬಾಹಿರ, ಇದರಿಂದ ಮುಸ್ಲಿಂ ಮಹಿಳೆಯರ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಪೀಠ ಗುರುವಾರ ಮಹತ್ವದ ತೀರ್ಪು ನೀಡಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಬರುವ ವಿವಾಹ, ಆಸ್ತಿ ಮತ್ತು ವಿಚ್ಛೇದನವನ್ನು ನಿಯಂತ್ರಿಸುವ ತ್ರಿವಳಿ ತಲಾಕ್ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ಯಾವುದೇ ವೈಯಕ್ತಿಕ ಕಾನೂನು ಸಂವಿಧಾನಕ್ಕಿಂತ ದೊಡ್ಡದಲ್ಲ.ಮೂರು ಬಾರಿ ತಲಾಕ್ ಎಂದು ಉಚ್ಛರಿಸುವುದರ ಮೂಲಕ ಪತ್ನಿಯನ್ನು ತ್ಯಜಿಸುವುದು ಕ್ರೂರತೆಯಾಗಿದೆ. ಈ ಪದ್ಧತಿಯಿಂದ ಸಂವಿಧಾನಾತ್ಮಕ ಅಧಿಕಾರಗಳ ದಹನವಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಅನೇಕ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಕ್ ಪದ್ಧತಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ ಮತ್ತು ಇದು ಲಿಂಗ ನ್ಯಾಯ, ಸಮಾನತೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿದೆ.
ಆದರೆ ಪ್ರಭಾವಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಪದ್ಧತಿಯನ್ನು ಸಮರ್ಥಿಸಿಕೊಂಡಿದ್ದು ಮಹಿಳೆಯನ್ನು ಸಾಯಿಸುವುದಕ್ಕಿಂತ ಆಕೆಯನ್ನು ತ್ಯಜಿಸುವುದು ಉತ್ತಮ. ಧಾರ್ಮಿಕ ಕಾನೂನುಗಳನ್ನು ಕೋರ್ಟ್ ಪ್ರಶ್ನಿಸುವಂತಿಲ್ಲ ಎಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ