ತಮ್ಮ ಪ್ರೀತಿಪಾತ್ರರ ಅಗಲಿಕೆಯಿಂದ ಬೇಸತ್ತ ಜನರು ಹುಚ್ಚಾಟ ಮಾಡುವುದನ್ನು ನೀವು ಕೇಳಿರಬಹುದು. ಜನರು ತಮ್ಮ ಪ್ರೀತಿಪಾತ್ರರಿಗಾಗಿ ಜೀವವನ್ನು ಕೊಡುವುದು ಅಥವಾ ಜೀವ ತೆಗೆಯುವ ಬಗ್ಗೆ ಹಲವಾರು ಘಟನೆಗಳನ್ನು ಸಹ ಕೇಳಿರಬಹುದು ಆದರೆ ನಾಯಿ ಮತ್ತು ಹಾವುಗಳನ್ನು ತಿನ್ನುವ ವ್ಯಕ್ತಿಯ ಬಗ್ಗೆ ಕೇಳಿರಲಿಕ್ಕಿಲ್ಲ. ಒಬ್ಬ ಮುದುಕ ನಾಯಿಮರಿಗಳು ಮತ್ತು ಹಾವುಗಳನ್ನು ತಿನ್ನುತ್ತಿದ್ದನ್ನು ಕಂಡು ಅವರನ್ನು ಪೋಲಿಸ್‌ಗೆ ಹಸ್ತಾಂತರಿಸಲಾಯಿತು.
ಈ ಘಟನೆಯು ಜಗದೀಶ್ಪುರ ಪೊಲೀಸ್ ಠಾಣೆ ಪ್ರದೇಶದ ವಿಕಾಸ್ ಕಾಲೊನಿಯಲ್ಲಿ ನಡೆದಿದೆ. ನೌರಂಗಿ ಲಾಲ್ ಎಂಬ ಹೆಸರಿನ 'ಬಾಬಾ' ಕೆಲ ಸಮಯದಿಂದ ಇಲ್ಲಿನ ಬೀದಿಗಳಲ್ಲಿ ವಾಸಿಸುತ್ತಿದ್ದ.
ನಾಯಿಮರಿಗಳು ಮತ್ತು ಹಾವುಗಳನ್ನು ಬಲಿ ನೀಡುವುದರಿಂದ ಅವರಿಗೆ ಶಕ್ತಿ ದೊರೆಯುತ್ತದೆ, ಈ ವಿಶೇಷ ಶಕ್ತಿಯಿಂದ ಅವರು ತನ್ನ ಸತ್ತ ಹೆಂಡತಿಯನ್ನು ಮತ್ತೆ ಬದುಕಿಸಲಿದ್ದಾರಂತೆ ಅದಕ್ಕಾಗಿಯೇ ಅವರು ಬಲಿ ನೀಡಿದ ಮಾಂಸವನ್ನು ತಿನ್ನುತ್ತಾರೆ. 'ನಾನು ಹಾವುಗಳನ್ನು ತಿನ್ನುತ್ತೇನೆ' ಎಂದು ಸಹ ಅವರು ಹೇಳುತ್ತಾರೆ. ಈವರೆಗೆ ಅವರು ನಾಲ್ಕು ನಾಯಿಮರಿಗಳನ್ನು ತಿಂದಿದ್ದಾರಂತೆ. ಈ ರೀತಿಯ ವಿಷಯಗಳನ್ನು ಅವರು ಹೇಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಜನರು ಅವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಅವರನ್ನು ವೈದ್ಯಕೀಯವಾಗಿ ಪರೀಕ್ಷಿಸಿ; ನಂತರ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಮನೋವೈದ್ಯರೊಬ್ಬರು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಕೆಲವೊಮ್ಮೆ ಒಂಟಿಯಾಗಿರುವವರು ತಮ್ಮ ಕಲ್ಪನಾ ಲೋಕದಲ್ಲಿ ಜೀವಿಸುತ್ತಿರುತ್ತಾರೆ. ನೈಜ ಜಗತ್ತಿಗೂ ತಮ್ಮ ಮನಸ್ಸಿನಲ್ಲಿ ನಿರ್ಮಿಸಿಕೊಂಡಿರುವ ಕಲ್ಪನಾ ಜಗತ್ತಿಗೂ ವ್ಯತ್ಯಾಸ ಗುರುತಿಸುವಲ್ಲಿ ವಿಫಲರಾಗುತ್ತಾರೆ. ಇಂತಹವರಿಗೆ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದಾರೆ.