ಆಂಧ್ರಪ್ರದೇಶ: ದೇಶದಲ್ಲಿಯೇ ಅತ್ಯಂತ ಶ್ರೀಮಂತ ದೇವಾಲಯ ಕೇರಳದ ಪದ್ಮನಾಭ ದೇವಸ್ಥಾನ ಎಂದು ಹೇಳಲಾಗುತ್ತಿದ್ದರೂ, ತಿರುಪತಿ ತಿಮ್ಮಪ್ಪನಿಗೆ ಮಾತ್ರ ದಿನದಿಂದ ದಿನಕ್ಕೆ ಭಕ್ತರ ಕಾಣಿಕೆ ಹೆಚ್ಚುತ್ತಲೇ ಹೋಗುತ್ತಿದೆ. ಸಾಲದೆಂಬಂತೆ ವಿದೇಶಿ ನಾಣ್ಯಗಳ ಗಂಟು ಕೂಡಾ ಟನ್ ಲೆಕ್ಕಾಚಾರದಲ್ಲಿ ಹುಂಡಿಗೆ ಬಂದು ಬೀಳುತ್ತಿದೆ.
ಪ್ರಸ್ತುತ ವರ್ಷ ತಿರುಮಲ ಸನ್ನಿಧಿಯಲ್ಲಿ ಸಂಗ್ರಹವಾದ ಹುಂಡಿ ಹಣ ಲೆಕ್ಕಾಚಾರ ಮಾಡುವಾಗ, ಬರೋಬ್ಬರಿ 35 ಟನ್ ವಿದೇಶಿ ನಾಣ್ಯಗಳು ಸಂಗ್ರವಾಗಿರುವುದು ಬೆಳಕಿಗೆ ಬಂದಿದೆ. ಈ ನಾಣ್ಯಗಳೆಲ್ಲ ಅಮೆರಿಕಾ, ಮಲೇಷ್ಯಾ ಹಾಗೂ ಸಿಂಗಾಪುರದ್ದಾಗಿದೆ. ಭಾರತದಲ್ಲಿ ವಿದೇಶಿ ನಾಣ್ಯ ಚಲಾವಣೆಯಿಲ್ಲದ ಕಾರಣ ದೇವಸ್ಥಾನದ ಆಡಳಿತ ಮಂಡಳಿ, ಬ್ಯಾಂಕ್ ಮೂಲಕ ಭಾರತೀಯ ಕರೆನ್ಸಿಗೆ ಬದಲಾಯಿಸಿಕೊಳ್ಳಲು ನಿರ್ಧರಿಸಿದೆ.
ಸಂಬಂಧಿಸಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ. ಸಾಂಬಶಿವ ರಾವ್ ಐಸಿಸಿಐ ಬ್ಯಾಂಕ್ ಅಧಿಕಾರಿ ಜತೆ ಮಾತುಕತೆ ನಡೆಸಿದ್ದು, ಬ್ಯಾಂಕ್ ಆರ್.ಬಿ.ಐ ಆದೇಶದ ಪ್ರಕಾರ ನಾಣ್ಯಗಳನ್ನು ಬದಲಾಯಿಸಿಕೊಳ್ಳಲು ಮುಂದೆ ಬಂದಿದೆ. ಯಾರು ಏನೇ ಹೇಳಲಿ, ತಿರುಪತಿ ತಿಮ್ಮಪ್ಪನ ಶಕ್ತಿ ಅಗಾಧವಾದ್ದು. ಆತ ಭಾರತದಲ್ಲಷ್ಟೇ ಅಲ್ಲ ವಿದೇಶದಲ್ಲೂ ತನ್ನ ಪ್ರಭಾವ ಬೀರಿ ಭಕ್ತ ಸಮೂಹವನ್ನು ಸೃಷ್ಟಿಸಿಕೊಂಡಿದ್ದಾನೆ. ಇದಕ್ಕೆ ತಿಮ್ಮಪ್ಪನ ಹುಂಡಿಗೆ ಬಿದ್ದಿರುವ ವಿದೇಶಿ ನಾಣ್ಯಗಳೇ ಸಾಕ್ಷಿಯಾಗಿವೆ