ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ನಡೆದ ಮೇಲೆ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಕ್ಯಾಂಪ್ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಮೊನ್ನೆಯಷ್ಟೇ ಭಾರತೀಯ ಯೋಧರಿಬ್ಬರ ಶಿರಚ್ಛೇದ ಮಾಡಿದ ಪಾಕ್ ಯೋಧರು ಉಗ್ರರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆಂದು ವರದಿಯಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 20 ಉಗ್ರರ ಕ್ಯಾಂಪ್ ಹೊಸದಾಗಿ ಹುಟ್ಟಿಕೊಂಡಿದೆ ಎನ್ನಲಾಗಿದೆ. ಕಳೆದ ವರ್ಷ ಸರ್ಜಿಕಲ್ ದಾಳಿ ನಡೆದ ನಂತರ 35 ರಷ್ಟಿದ್ದ ಉಗ್ರರ ಕ್ಯಾಂಪ್ ಇದೀಗ 55 ಕ್ಕೇರಿದೆ ಎನ್ನಲಾಗಿದೆ.
ಈ ಉಗ್ರರು ಗಡಿ ಪ್ರದೇಶಕ್ಕೆ ಮತ್ತಷ್ಟು ಹತ್ತಿರ ಬಂದಿದ್ದಾರೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಗುಪ್ತಚರ ವರದಿ ಪ್ರಕಾರ, 160 ಉಗ್ರರು ಕ್ರಿಯಾಶೀಲರಾಗಿದ್ದು, ಇವರಿಗೆ ಪಾಕ್ ಸೇನೆಯ ಅಭಯ ಹಸ್ತವಿದೆ.
ಪಾಕ್ ಸೇನೆಯ ನಿರ್ದೇಶನದಂತೆ ಇವರು ಭಾರತೀಯ ಸೇನೆ ಮೇಲೆ ದಾಳಿ ನಡೆಸುತ್ತಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಮೊನ್ನೆ ನಡೆದ ಯೋಧರ ಶಿರಚ್ಛೇದ ಪ್ರಕರಣದಲ್ಲೂ ಪಾಕ್ ಸೇನೆ ಜತೆ ಉಗ್ರರು ಕೈ ಜೋಡಿಸಿದ್ದರು ಎನ್ನಲಾಗಿತ್ತು. ಇದು ಭಾರತದ ಪಾಲಿಗೆ ಆತಂಕದ ಸುದ್ದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ