ಲಕ್ನೋ : ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ್ದು, ಆ ಮೂಲಕ ಸಿಎಎ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಸಿಎಎ ವಿರುದ್ಧವಾಗಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಯಾಗಿದ್ದು, ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇದರಲ್ಲಿ ಸುಮಾರು 19 ಮಂದಿ ಸಾವಿಗೀಡಾಗಿದ್ದರು. ಇವೆಲ್ಲದರ ನಡುವೆಯೂ ಇದೀಗ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸಿಎಎಯನ್ನು ಜಾರಿಗೊಳಿಸಿದೆ.
ರಾಜ್ಯದ 19 ಜಿಲ್ಲೆಗಳಲ್ಲಿ ನೆಲೆಸಿರುವ ಹಿಂದೂ ನಿರಾಶ್ರಿತರ ಪಟ್ಟಿಯನ್ನು ಕೇಂದ್ರ ಸರ್ಕಾರದ ಗೃಹ ಸಚಿವಾಲಯಕ್ಕೆ ಕಳುಹಿಸಿದೆ. ಇದರಲ್ಲಿ 40000ಕ್ಕೂ ಹೆಚ್ಚು ಮುಸ್ಲಿಮೇತರ ವಲಸಿಗರು ನೆಲೆಸಿದ್ದಾರೆ ಎಂದು ವರದಿ ತಿಳಿಸುತ್ತಿದೆ.