ನವದೆಹಲಿ : ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿ ಆರೋಪಿಗಳ ಬಂಧನ, ಶೋಧ ನಡೆಸುವುದು,
ಆಸ್ತಿ ವಶಪಡಿಸಿಕೊಳ್ಳುವ ಅಧಿಕಾರ ಸೇರಿದಂತೆ ಇತ್ಯಾದಿ ವಿಚಾರಗಳ ಬಗ್ಗೆ ಜಾರಿ ನಿರ್ದೇಶನಾಲಯದ(ಇಡಿ) ವಿರುದ್ಧ ಎತ್ತಿದ್ದ ಎಲ್ಲ ಆಕ್ಷೇಪಣೆಗಳನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.
ಪಿಎಂಎಲ್ಎ ಕಾಯ್ದೆಯ ಹಲವು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾ. ಎ.ಎಂ ಖಾನ್ವಿಲ್ಕರ್, ನ್ಯಾ. ದಿನೇಶ್ ಮಹೇಶ್ವರಿ, ನ್ಯಾ. ಸಿ.ಟಿ. ರವಿಕುಮಾರ್ ಅವರಿದ್ಧ ತ್ರಿಸದಸ್ಯ ಪೀಠ ಇಂದು ಆಕ್ಷೇಪ ವ್ಯಕ್ತವಾದ ಇಡಿಯ ಎಲ್ಲಾ ನಿಬಂಧನೆಗಳನ್ನು ಎತ್ತಿ ಹಿಡಿದಿದೆ. ಈ ಮಹತ್ವದ ತೀರ್ಪಿನಿಂದ ಇಡಿಗೆ ಮತ್ತಷ್ಟು ಬಲ ಬಂದಿದೆ.
ಇಡಿ ಅಧಿಕಾರಿಕಾರಿಗಳು ಪೊಲೀಸ್ ಅಧಿಕಾರಿಗಳು ಅಲ್ಲ. ಹೀಗಾಗಿ ಸೆಕ್ಷನ್ 50ರ ಅಡಿ ಹೇಳಿಕೆ ನೀಡುವುದು ಸಂವಿಧಾನದ ಪರಿಚ್ಚೇದ 20(3) ಅಡಿ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದೆ. ಸಂವಿಧಾನದ ಪರಿಚ್ಚೇದ 20(3) ಅಡಿ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಲ್ಲಿ ಅಪರಾಧಿಗೆ ತನ್ನ ವಿರುದ್ಧ ತಾನೇ ಸಾಕ್ಷಿ ಹೇಳುವಂತೆ ಒತ್ತಾಯ ಮಾಡುವಂತಿಲ್ಲ.
ಇಸಿಐಆರ್(ಎನ್ಫೋರ್ಸ್ಮೆಂಟ್ ಕೇಸ್ ಇನ್ರ್ಫಾಮೆಷನ್ ರಿಪೋರ್ಟ್) ಅನ್ನು ಎಫ್ಐಆರ್(ಫಸ್ಟ್ ಇನ್ರ್ಫಾಮೆಷನ್ ರಿಪೋರ್ಟ್) ಜೊತೆ ಸಮೀಕರಿಸಲು ಸಾಧ್ಯವಿಲ್ಲ. ಇದೊಂದು ಇಡಿಯ ಆಂತರಿಕ ದಾಖಲೆಯಾಗಿದೆ.