ಹೊಸದಿಲ್ಲಿ, ಸೆ.15 : ಗೋಧ್ರಾ ದಂಗೆ ಪ್ರಕರಣಗಳ ನ್ಯಾಯಾಂಗ ಪೂರ್ವ ನಿದರ್ಶನದಿಂದ ಅಂಶವೊಂದನ್ನು ಮಾದರಿಯಾಗಿ ತೆಗೆದುಕೊಂಡಿರುವ ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಈಶಾನ್ಯ ದಿಲ್ಲಿ ದಂಗೆಗಳ ಸಂದರ್ಭದಲ್ಲಿ 24ರ ಹರೆಯದ ಯುವಕನ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಧರ್ಮಗಳಿಗೆ ಅನುಗುಣವಾಗಿ ವಿಚಾರಣೆಯನ್ನು ಪ್ರತ್ಯೇಕಗೊಳಿಸುವಂತೆ ಮಂಗಳವಾರ ಆದೇಶಿಸಿದೆ.
ಆರೋಪಿಗಳು ಹಿಂದು ಮತ್ತು ಮುಸ್ಲಿಂ ಧರ್ಮಗಳಿಗೆ ಸೇರಿದವರಾಗಿರುವುದರಿಂದ ವಿಚಾರಣಾಧೀನ ಕೈದಿಗಳಲ್ಲಿ ವಿಂಗಡಣೆಯಿದೆ ಮತ್ತು ಒಂದೇ ವಿಚಾರಣೆಯನ್ನು ನಡೆಸುವುದು ಅವರ ಪ್ರತಿವಾದವನ್ನು ಪೂರ್ವಗ್ರಹೀತಗೊಳಿಸುತ್ತದೆ ಎಂದು ಅದು ಹೇಳಿದೆ.
ಒಂದೇ ಎಫ್ಐಆರ್ ನಲ್ಲಿ ಮೂವರು ಹಿಂದುಗಳು ಮತ್ತು ಇಬ್ಬರು ಮುಸ್ಲಿಮರು ಜಂಟಿ ವಿಚಾರಣೆಯನ್ನು ಎದುರಿಸಬೇಕಿತ್ತು ಮತ್ತು ಅವರ ವಿರುದ್ಧ ದಂಗೆ,ಅಗ್ನಿಸ್ಪರ್ಶ ಮತ್ತು ಸಲ್ಮಾನ್ ಎಂಬಾತನ ಕೊಲೆ ಆರೋಪಗಳನ್ನು ಹೊರಿಸಲಾಗಿದೆ. 2020,ಫೆ.24ರಂದು ಈಶಾನ್ಯ ದಿಲ್ಲಿಯ ಶಿವವಿಹಾರ ಪ್ರದೇಶದಲ್ಲಿ ದಂಗೆನಿರತ ಗುಂಪೊಂದರ ಗುಂಡಿನೇಟಿನಿಂದಾಗಿ ತೀವ್ರವಾಗಿ ಗಾಯಗೊಂಡು ಸಲ್ಮಾನ್ ಮೃತಪಟ್ಟಿದ್ದ.
ಎರಡು ವಿಭಿನ್ನ ಒಳಸಂಚುಗಳು ಮತ್ತು ಅಕ್ರಮ ಸಮಾವೇಶಗಳಡಿ ಆರೋಪಿಗಳ ವಿಂಗಡಣೆಯೊಂದಿಗೆ ವಿಚಾರಣೆಯ ಮುಂದುವರಿಕೆಗೆ ಅನುಮತಿ ನೀಡಬಹುದೇ ಎಂಬ ವಿಲಕ್ಷಣ ಸ್ಥಿತಿಯು ಉದ್ಭವಿಸಿದೆ ಎಂದು ಹೇಳಿದ ನ್ಯಾ.ವಿನೋದ ಯಾದವ ಅವರು, ಆರೋಪಿಗಳು ವಿಭಿನ್ನ ಧರ್ಮಗಳಿಗೆ ಸೇರಿರುವುದರಿಂದ ಜಂಟಿ ವಿಚಾರಣೆಯು ಖಂಡಿತವಾಗಿಯೂ ಅವರ ಪ್ರತಿವಾದವನ್ನು ಪೂರ್ವಗ್ರಹೀತಗೊಳಿಸುತ್ತದೆ ಎಂದರು.
ಎರಡು ವಾರಗಳಲ್ಲಿ ಸಂಪೂರ್ಣ ದೋಷಾರೋಪ ಪಟ್ಟಿಯನ್ನು ಭೌತಿಕ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾ.ಯಾದವ ಕ್ರೈಂ ಬ್ರಾಂಚ್ ಡಿಸಿಪಿ ಜೆ.ಎನ್.ತಿರ್ಕೆ ಅವರಿಗೆ ನಿರ್ದೇಶ ನೀಡಿದರು.
ಗೋಧ್ರಾ ಕೋಮುದಂಗೆಗಳ ಪ್ರಕರಣದಿಂದ ಪೂರ್ವ ನಿದರ್ಶನವನ್ನು ಎತ್ತಿಕೊಂಡ ನ್ಯಾಯಾಧೀಶರು,ಆರೋಪಿಗಳ ವಿಚಾರಣೆಯನ್ನು ಪ್ರತ್ಯೇಕಗೊಳಿಸುವುದು ಸೂಕ್ತ ಎಂದು ತಾನು ಭಾವಿಸಿದ್ದೇನೆ. ಗೋಧ್ರಾ ಕೋಮು ದಂಗೆಗಳ ವಿಚಾರಣೆಯನ್ನು ನಡೆಸುತ್ತಿದ್ದ ಗುಜರಾತನ ನ್ಯಾಯಾಲಯದ ಮುಂದೆಯೂ ಇಂತಹುದೇ ಸ್ಥಿತಿ ಉದ್ಭವಿಸಿತ್ತು ಮತ್ತು ಎರಡು ವಿಭಿನ್ನ ಸಮುದಾಯಗಳ ಆರೋಪಿಗಳ ವಿಚಾರಣೆಯನ್ನು ಪ್ರತ್ಯೇಕಗೊಳಿಸಲು ಉಚ್ಚ ನ್ಯಾಯಾಲಯವು ಅನುಮತಿಯನ್ನು ನೀಡಿತ್ತು ಎಂದು ತಿಳಿಸಿದರು.
ಈ ನಡುವೆ ಇನ್ನೊಂದು ದೋಷಾರೋಪ ಪಟ್ಟಿಯನ್ನು ಆರೋಪಿಗಳಾದ ಮುಹಮ್ಮದ್ ಫುರ್ಕಾನ್ ಮತ್ತು ಮುಹಮ್ಮದ್ ಇರ್ಷಾದ್ ವಿರುದ್ಧ ದೋಷಾರೋಪ ಪಟ್ಟಿಯನ್ನಾಗಿ ಪರಿಗಣಿಸಲಾಗುವುದು ಎಂದು ಅವರು ಹೇಳಿದರು. ನ್ಯಾಯಾಲಯವು ಪ್ರಕರಣದಲ್ಲಿ ಆರೋಪಗಳನ್ನು ರೂಪಿಸಿದ ಬಳಿಕ ವಿಚಾರಣೆಯನ್ನು ಪ್ರತ್ಯೇಕಗೊಳಿಸುವ ನಿರ್ಧಾರ ಹೊರಬಿದ್ದಿದೆ.