ತೆಲಂಗಾಣ: ತೆಲಂಗಾಣ ಮತ್ತು ಪುದುಚೇರಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳಿಸೈ ಸೌಂದರರಾಜನ್ ಅವರು ಸೋಮವಾರ ಎರಡೂ ರಾಜ್ಯಗಳ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದು, ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
ತಮಿಳುಸೈ ಸೌಂದರರಾಜನ್ ಅವರು ತೆಲಂಗಾಣ ರಾಜ್ಯಪಾಲರಾಗಿ ನೇಮಕವಾಗುವ ಮೊದಲು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆಯಾಗಿದ್ದರು. ಇದೀಗ ಮತ್ತೆ ಅವರು ಸಕ್ರಿಯ ರಾಜಕಾರಣಕ್ಕೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
62 ವರ್ಷದ ತಮಿಳುಸೈ ಅವರು 2019ರ ನವೆಂಬರ್‌ನಲ್ಲಿ ತೆಲಂಗಾಣದ ಎರಡನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ನಂತರ ಫೆಬ್ರವರಿ 2021ರಲ್ಲಿ ಅವರಿಗೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿತ್ತು.
ತಮಿಳುಸೈ 2019ರ ಚುನಾವಣೆಯಲ್ಲಿಯೂ ತೂತುಕುಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಡಿಎಂಕೆಯ ಕನಿಮೋಳಿ ಕರುಣಾನಿಧಿ ವಿರುದ್ಧ ಸ್ಪರ್ಧಿಸಿದ್ದ ಅವರು ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದರು. ಕನಿಮೋಳಿ 5,63,143 ಮತಗಳನ್ನು ಗಳಿಸಿದರೆ, ಸೌಂದರರಾಜನ್ ಕೇವಲ 2,15,934 ಮತಗಳನ್ನು ಗಳಿಸಿ, 3,47,209 ಮತಗಳ ಭಾರಿ ಅಂತರದಿಂದ ಸೋಲೊಪ್ಪಿಕೊಂಡಿದ್ದರು. ಮತ್ತೆ ಅದೇ ಕ್ಷೇತ್ರದಲ್ಲಿ ಅವರು ಕನಿಮೋಳಿ ವಿರುದ್ಧ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.