ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕಾಗಿ ತಯಾರಿಸುತ್ತಿದ್ದ ಸಾಂಬಾರ್‌ನಲ್ಲಿ ಬಿದ್ದು 5 ವರ್ಷದ ಬಾಲಕ ದುರ್ಮರಣವನ್ನಪ್ಪಿದ ದಾರುಣ ಘಟನೆ ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಇದುಲೂರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು ಬಾಲಕ ಜನಾರ್ಧನ ಒಂದನೆಯ ತರಗತಿಯಲ್ಲಿ ಓದುತ್ತಿದ್ದು, ಶುಕ್ರವಾರ ಮಧ್ಯಾಹ್ನ ಊಟ ಮಾಡಲೆಂದು ಗೆಳೆಯರ ಜತೆಯಲ್ಲಿ ಸರತಿ ಸಾಲಲ್ಲಿ ನಿಂತಿದ್ದ. ಆತನ ಹಿಂದೆ ನಿಂತವರಲ್ಲಿ ಯಾರೋ ದೂಡಿದಾಗ ಆತ ನೇರವಾಗಿ ಸಾಂಬಾರ್ ಪಾತ್ರೆಗೆ ಬಿದಿದ್ದಾನೆ.
70 ಪ್ರತಿಶತ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆತನನ್ನು ನಲಗೊಂಡಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತನ ಸ್ಥಿತಿ ಗಂಭೀರವಾಗಿದ್ದರಿಂದ ಹೈದರಾಬಾದ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಆತ ಕೊನೆಯುಸಿರೆಳೆದಿದ್ದಾನೆ.
ಬಾಲಕನ ಅಜ್ಜ ನೀಡಿರುವ ದೂರಿನಂತೆ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದ ಮೂವರು ಮಹಿಳೆಯರ ವಿರುದ್ಧ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕಟಂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಲೆಯ ಮುಖ್ಯೋಧ್ಯಾಪಕನನ್ನು ಅಮಾನತು ಮಾಡಲಾಗಿದೆ.
ಮೃತನ ಕುಟುಂಬಕ್ಕೆ ಜಿಲ್ಲಾಧಿಕಾರಿ 2 ಲಕ್ಷ ರೂಪಾಯಿ ಪರಿಹಾರ ಧನ, ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ಮತ್ತು ಒಂದು ನಿವೇಶನವನ್ನು ಘೋಷಿಸಿದ್ದಾರೆ.