ನವದೆಹಲಿ : ಇಂಧನದ ಮೇಲೆ ವಿಧಿಸಿರುವ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಉಚಿತ ಲಸಿಕೆ, ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಉಚಿತ ಊಟ, ಅಡುಗೆ ಅನಿಲ ಹಾಗೂ ಇತರ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ದರ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಖಂಡಿಸಿ ಇಂಧನದ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ಸಂದರ್ಭದಲ್ಲಿ ಪುರಿ ಈ ಹೇಳಿಕೆ ನೀಡಿದ್ದಾರೆ.
ದೇಶೀಯ ದರಗಳು ಅಂತರರಾಷ್ಟ್ರೀಯ ತೈಲ ಮಾರುಕಟ್ಟೆ ಬೆಲೆಯೊಂದಿಗೆ ಸಂಬಂಧ ಹೊಂದಿವೆ. ವಿವಿಧ ಕಾರಣಗಳಿಂದಾಗಿ ಬೆಲೆ ಏರಿಕೆಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದೂ ಮನವಿ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಪುರಿ, ʼಬೆಲೆ ಏರಿಕೆಯಾಗುತ್ತಿದೆ. ನೀವು ತೆರಿಗೆ ಇಳಿಸುತ್ತಿಲ್ಲವೇಕೆ?ʼ ಎಂಬುದು ನಾವು ಭಾರತದಲ್ಲಿ ಮಾತ್ರ ಕೇಳಬಹುದಾದ ತುಂಬಾ ಸರಳವಾದ ರಾಜಕೀಯ ನಿರೂಪಣೆಯಾಗಿದೆ. ಹಾಗಾಗಿಯೇ ಪ್ರತಿಭಾರಿ ಬೆಲೆ ಏರಿಕೆಯಾದಾಗಲೂ ಅದು ನಮ್ಮ ಬುಡಕ್ಕೆ ನಾವೇ ಕೊಡಲಿ ಹಾಕಿಕೊಳ್ಳುವಂತಹ ಪರಿಸ್ಥಿತಿಯನ್ನು ತಂದಿಡುತ್ತದೆʼ ಎಂದಿದ್ದಾರೆ.