ತಮಿಳುನಾಡಿನ ನಾಲ್ವರು ಸಚಿವರು ಮಂಗಳವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ತಮ್ಮ ನಾಯಕಿ , ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ಭೇಟಿಯಾದರು.
ಮುಖ್ಯಮಂತ್ರಿ ಪಳನಿಸ್ವಾಮಿ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಕಾಮರಾಜ್, ಎಸ್.ಸಂಗೊಟ್ಟಿಯನ್, ದಿಂಡಿಗಲ್ ಶ್ರೀನಿವಾಸನ್ ಹಾಗೂ ಸೆಲ್ಲೂರು.ಕೆ. ರಾಜು ಶಶಿಕಲಾ ಅವರನ್ನು ಭೇಟಿ ಮಾಡಿ ಮಾತನಾಡಿದರು. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಇದೇ ಮೊದಲು ಅವರು ಚಿನ್ನಮ್ಮನನ್ನು ಭೇಟಿಯಾಗುತ್ತಿರುವುದು.
ಮಾಜಿ ಸಿಎಂ, ತಮ್ಮ ಆಪ್ತ ಸಖಿ ಜೆ.ಜಯಲಲಿತಾ ಸಾವಿನ ಬಳಿಕ ಮುಖ್ಯಮಂತ್ರಿ ಪಟ್ಟಕ್ಕೇರಲು ಹವಣಿಸುತ್ತಿದ್ದ ಶಶಿಕಲಾ ನಟರಾಜನ್ ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಇನ್ನೊಂದೆಡೆ ಪನ್ನೀರ್ ಸೆಲ್ವಂ ಬಳಗದಲ್ಲಿ ಗುರುತಿಸಿಕೊಂಡಿರುವ 12 ಸಂಸದರು ನಿನ್ನೆ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಜಯಲಲಿತಾ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡಿಕೊಂಡರು.