ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವರ್ತನೆಗೆ ಸಿಟ್ಟಿಗೆದ್ದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷರ ಮೇಲೆ ಸಚಿವೆ ಸುಷ್ಮಾ ಹರಿಹಾಯ್ದಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಢೋಕ್ಲಾಂ ಗಡಿ ವಿವಾದದ ವಿಚಾರದಲ್ಲಿ ವೈಮನಸ್ಯವಿದೆ. ಈ ಸಂದರ್ಭದಲ್ಲಿ ನಮ್ಮ ದೇಶದ ಅತೀ ದೊಡ್ಡ ಪಕ್ಷವೊಂದರ ನಾಯಕರೊಬ್ಬರು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಿ ಗಡಿ ವಿವಾದದ ಸ್ಥಿತಿಗತಿಗಳ ಬಗ್ಗೆ ಚರ್ಚಿಸುವುದರ ಬದಲು ಚೀನಾದ ರಾಯಭಾರಿ ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ಚರ್ಚಿಸುವ ಅಗತ್ಯವಿತ್ತೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಹಿಂದೆ 1962 ರಲ್ಲಿ ಭಾರತ ಮತ್ತು ಚೀನಾ ನಡುವೆ ಮನಸ್ತಾಪ ಏರ್ಪಟ್ಟಾಗ ವಿಶೇಷ ಅಧಿವೇಶನ ಕರೆಯಲು ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅಂದು ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂಗೆ ಪತ್ರ ಬರೆದಿದ್ದರು. ಆದರೆ ಇಂದು ವಿರೋಧ ಪಕ್ಷದವರಿಂದ ಅಂತಹ ನಡೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.