ಗೋ ರಕ್ಷಕ ದಳದ ದಾಳಿಗಳ ಕುರಿತ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು 6 ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ. ಗುಂಪು ಕಟ್ಟಿಕೊಂಡು ಹಿಂಸಾತ್ಮಕ ದಾಳಿ ನಡೆಸುವ ಮೂಲಕ ಜಾತಿ, ಧರ್ಮಗಳ ನಡುವಿನ ಸಾಮರಸ್ಯ ಹಾಳುಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಸ್ವಯಂಪ್ರೇರಿತ ಗೋರಕ್ಷಕ ದಳಗಳನ್ನ ನಿರ್ಬಂಧಿಸದಿರುವ ಬಗ್ಗೆ ವಿವರಣೆ ಕೋರಿ ಕೋರ್ಟ್ ನೋಟಿಸ್ ನೀಡಿದೆ.
3 ವಾರಗಳಲ್ಲಿ ಈ ಬಗ್ಗೆ ವಿವರಣೆ ನೀಡುವಂತೆ ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ್, ಜಾರ್ಖಂಡ್ ಮತ್ತು ಕರ್ನಾಟಕ ರಾಜ್ಯಗಳಿಗೆ ದೀಪಕ್ ಮಿಶ್ರಾ ನೇತೃತ್ವದ ಏಕಸದಸ್ಯ ಪೀಠ ಆದೇಶಿಸಿದೆ. ಗೋರಕ್ಷಕ ದಳದ ನಿಷೇಧ ಕೋರಿ ಕಾಂಗ್ರೆಸ್ ಮುಖಂಡ ತಹಸೀನ್ ಪೂನವಾಲಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ.
ರಾಜಸ್ಥಾನದಲ್ಲಿ ಗೋರಕ್ಷಕದಳದಿಂದ ಗಂಭೀರ ಹಲ್ಲೆಗೊಳಗಾಗಿದ್ದ ವ್ಯಕ್ತಿ ಮೃತಪಟ್ಟಿದ್ದು, ದೇಶಾದ್ಯಂತ ಈ ಅಕ್ರಮ ಸಂಘಟನೆಗಳಿಂದ ಹಿಂಸೆ ನಡೆಯುತ್ತಿದೆ. ರಾಜ್ಯ ಸರ್ಕಾರಗಳು ತಡೆಯುವ ಗೋಜಿಗೆ ಹೋಗಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.