ಹಿಜ್ಬುಲ್ ಮುಜಾಹಿದಿನ್ ಉಗ್ರ ಬುರ್ಹಾನ್ ವನಿ ಮತ್ತು ಲಷ್ಕರ್-ಎ-ತೊಯಿಬಾ ಮುಖ್ಯಸ್ಥ ಹಫೀಜ್ ಸಯೀದ್ ಮಧ್ಯೆ ನಡೆದ ಸಂವಾದದ ಆಡಿಯೋ ಬಹಿರಂಗವಾಗುತ್ತಿದ್ದಂತೆ, ಪಿಡಿಪಿಯೊಂದಿಗೆ ಬಿಜೆಪಿ ಮೈತ್ರಿ ಅಂತ್ಯಗೊಳಿಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಒತ್ತಾಯಿಸಿದ್ದಾರೆ.
ಮೆಹಬೂಬಾ ಮುಫ್ತಿ ನಾಯಕತ್ವದ ಪಿಡಿಪಿ ಪಕ್ಷ ಬುರ್ಹಾನ್ ವನಿಯೊಂದಿಗೆ ಸಹಾನುಭೂತಿ ಹೊಂದಿದ್ದರಿಂದ ಆ ಪಕ್ಷದೊಂದಿಗೆ ಮೈತ್ರಿ ಬುದ್ದಿವಂತ ನಿರ್ಧಾರವಲ್ಲ. ಪಿಡಿಪಿಯೊಂದಿಗೆ ಮೈತ್ರಿ ಹಿಂದೆಯೇ ಅಂತ್ಯವಾಗಬೇಕಿತ್ತು. ಮೋದಿ ಸರಕಾರ ಮೈತ್ರಿ ಅಂತ್ಯಗೊಳಿಸುವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಜಮ್ಮು ಕಾಶ್ಮಿರದಲ್ಲಿ ಬಿಜೆಪಿಯೊಂದಿಗೆ ಸಮ್ಮಿಶ್ರ ಸರಕಾರ ನಡೆಸುತ್ತಿರುವ ಪಿಡಿಪಿ, ಹಿಜ್ಬುಲ್ ಮುಜಾಹಿದಿನ್ ಕಮಾಂಡರ್ ಬುರ್ಹಾನ್ ವನಿ ಹತ್ಯೆಯನ್ನು ವಿರೋಧಿಸಿದೆ. ಪಿಡಿಪಿ ಮುಖ್ಯಸ್ಥೆ ಮುಫ್ತಿ, ಬುರ್ಹಾನ್ ವನಿಯನ್ನು ಹತ್ಯೆ ಮಾಡಬಾರದಿತ್ತು. ಅವರಿಗೆ ಮತ್ತೊಂದು ಅವಕಾಶ ಕೊಡಬೇಕಾಗಿತ್ತು ಎಂದು ಹೇಳಿಕೆ ನೀಡಿದ್ದರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುರ್ಹಾನ್ ವನಿ ಮತ್ತು ಹಫೀಜ್ ಸಯೀದ್ ಸಂಭಾಷಣೆಯಿಂದ ಎರಡು ಉಗ್ರಗಾಮಿ ಸಂಘಟನೆಗಳು ಭಾರತೀಯ ಸೇನೆ ವಿರುದ್ಧ ಸಂಚು ರೂಪಿಸುತ್ತಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.