ನವದೆಹಲಿ: 'ದೆಹಲಿಯ ಎಎಪಿ ಸರ್ಕಾರದ 'ದೇಶ್ ಕಾ ಮೆಂಟರ್ಸ್' ಕಾರ್ಯಕ್ರಮದ ಬ್ರ್ಯಾಂಡ್ ರಾಯಭಾರಿಯನ್ನಾಗಿ ನಟ ಸೋನು ಸೋದ್ ಅವರನ್ನು ನೇಮಿಸಲಾಗಿದೆ' ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಜೀವನವನ್ನು ಆರಿಸುವಲ್ಲಿ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
'ಸರ್ಕಾರಿ ಶಾಲೆಯ ಬಹುತೇಕ ವಿದ್ಯಾರ್ಥಿಗಳು ತೀರಾ ಬಡ ಕುಟುಂಬಗಳಿಂದ ಬಂದವರಾಗಿರುತ್ತಾರೆ. ಅವರಿಗೆ ಮಾರ್ಗದರ್ಶನ ನೀಡಲು ಕೆಲವೇ ಜನರಿರುತ್ತಾರೆ. ಹಾಗಾಗಿ ಈ ಮಕ್ಕಳಿಗೆ ಮಾರ್ಗದರ್ಶಕರಾಗುವಂತೆ ನಾವು ವಿದ್ಯಾವಂತರಲ್ಲಿ ಮನವಿ ಮಾಡುತ್ತೇವೆ. ಈ ಕಾರ್ಯಕ್ರಮದ ಬ್ರ್ಯಾಂಡ್ ರಾಯಭಾರಿಯನ್ನಾಗಿ ಸೋನು ಸೂದ್ ಕಾರ್ಯ ನಿರ್ವಹಿಸುವರು' ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸೋನು ಸೂದ್ ಹಾಗೂ ಕೇಜ್ರಿವಾಲ್ ಅವರು, 'ನಾವು ಕೇವಲ ಕಾರ್ಯಕ್ರಮದ ಕುರಿತಾಗಿ ಮಾತುಕತೆ ನಡೆಸಿದೆವು. ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರವನ್ನು ಚರ್ಚಿಸಿಲ್ಲ' ಎಂದು ಸ್ಪಷ್ಟನೆ ನೀಡಿದರು.