ನವದೆಹಲಿ: ಪ್ರಧಾನಿ ಮೋದಿ ಇಂದು ಮತ್ತೆ ಮೂವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಭಾರತದ ಮಾಜಿ ಪ್ರಧಾನಿಗಳಾದ ಪಿವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಮತ್ತು ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಧಾನ ಮಾಡಲಾಗುತ್ತದೆ. ಇದಕ್ಕೆ ಮೊದಲು ಇತ್ತೀಚೆಗಷ್ಟೇ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಧಾನ ಮಾಡಲಾಗಿತ್ತು. ಈ ಮೂಲಕ ಒಂದೇ ತಿಂಗಳ ಅವಧಿಯಲ್ಲಿ ಒಟ್ಟು ಐವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಶ್ತಿಯಾದ ಭಾರತ ರತ್ನ ಪ್ರಶಸ್ತಿ ಗೌರವ ಸಲ್ಲಿಸಲಾಗುತ್ತಿದೆ.
ಸೋನಿಯಾ ಗಾಂಧಿ ಪ್ರತಿಕ್ರಿಯೆ
ಇದೀಗ ಭಾರತ ರತ್ನ ಘೋಷಣೆ ಮಾಡಿದವರ ಪೈಕಿ ಪಿವಿ ನರಸಿಂಹ ರಾವ್ ನೆಹರೂ ಕುಟುಂಬಕ್ಕೆ ಸೇರದ ಓರ್ವ ಪೂರ್ಣ ಪ್ರಮಾಣದಲ್ಲಿ ದೇಶವನ್ನಾಳಿದ ಪ್ರಧಾನಿಯಾಗಿದ್ದರು. ಇದೀಗ ಕೇಂದ್ರ ಸರ್ಕಾರ ಭಾರತ ರತ್ನ ಘೋಷಣೆ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಸೋನಿಯಾ ಗಾಂಧಿ ನಾನು ಅವರನ್ನು ಸ್ವಾಗತಿಸುತ್ತೇನೆ. ಯಾಕಾಗಬಾರದು? ಎಂದಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರ ಘೋಷಿಸಿರುವ ಭಾರತ ರತ್ನ ಪ್ರಶಸ್ತಿಗೆ ತಮ್ಮ ತಕರಾರಿಲ್ಲ ಎಂದಿದ್ದಾರೆ.
ಸಂಸತ್ ಆವರಣದಲ್ಲಿ ತಮ್ಮನ್ನು ಪ್ರಶ್ನಿಸಿದ ಸುದ್ದಿಗಾರರಿಗೆ ಸೋನಿಯಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಆದರೆ ಇದಕ್ಕೆ ಹೆಚ್ಚಾಗಿ ಯಾವುದೇ ಕಾಮೆಂಟ್ ಮಾಡಲು ನಿರಾಕರಿಸಿದ್ದಾರೆ.