ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಒಳಜಗಳ ಮುಂದುವರೆದಿದ್ದು ಪಕ್ಷದ ಅಧ್ಯಕ್ಷ ಶಿವಪಾಲ್ ಯಾದವ್, ಬುಧವಾರ ಅಖಿಲೇಶ್ ಸಂಪುಟದ ಸಚಿವ ಪವನ್ ಪಾಂಡೆಯನ್ನು 6 ವರ್ಷಗಳ ಮಟ್ಟಿಗೆ ಪಕ್ಷದಿಂದ ವಜಾಗೊಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಅಶು ಮಲಿಕ್ ಅವರನ್ನು ಥಳಿಸಿದ ಆರೋಪದ ಮೇಲೆ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ.
ಸಚಿವ ಸಂಪುಟದಿಂದ ಸಹ ಅವರನ್ನು ಪದಚ್ಯುತಗೊಳಿಸಬೇಕು ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಪತ್ರ ಬರೆಯುತ್ತಿರುವುದಾಗಿ ಶಿವಪಾಲ್ ಯಾದವ್ ತಿಳಿಸಿದ್ದಾರೆ.
ತಮ್ಮ ಕ್ರಮವನ್ನು ಸಮರ್ಥಿಸಿಕೊಡಿರುವ ಯಾದವ್, ಪಕ್ಷದೊಳಗೆ ಅಶಿಸ್ತು ಮತ್ತು ಗೂಂಡಾಗಿರಿಯನ್ನು ಸಹಿಸಿಕೊಳ್ಳಲಾಗದು ಎಂದು ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರ ನಿವಾಸದಲ್ಲಿ ಪಾಂಡೆ ಮತ್ತು ಅಖಿಲೇಶ್ ಅವರ ಮತ್ತೊಬ್ಬ ಬೆಂಬಲಿಗ ನನ್ನ ಕಪಾಳಮೋಕ್ಷ ಮಾಡಿದ್ದಾರೆ ಮತ್ತು ಥಳಿಸಿದ್ದಾರೆ ಎಂದು ಮಲ್ಲಿಕ್ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲೇಶ್ ತಮ್ಮ ನಿವಾಸದಲ್ಲಿರಲಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.