ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರೇನ್‌ಕೋಟ್ ಧರಿಸಿ ಸ್ನಾನ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದನ್ನು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಕೂಡ ಖಂಡಿಸಿದೆ. ಮೋದಿ ಇತರರ ಸ್ನಾನದ ಕೋಣೆಯಲ್ಲಿ ಇಣುಕಿ ನೋಡುವುದೇ ಕೆಲಸ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದ ಹೇಳಿಕೆಯನ್ನು ಪುನರುಚ್ಚರಿಸಿರುವ ಶಿವಸೇನೆ ಬಾತರೂಮ್ ಪಾಲಿಟಿಕ್ಸ್ ಮಾಡುವುದನ್ನು ಬಿಟ್ಟು ನಿಮ್ಮ ಹುದ್ದೆಯ ಘನತೆ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದೆ.
ಅಷ್ಟೇ ಅಲ್ಲದೆ ಜಾತಕದ ಬಗ್ಗೆ ಉಲ್ಲೇಖಿಸುತ್ತ ವಿರೋಧ ಪಕ್ಷಗಳಿಗೆ ಬೆದರಿಕೆ ಒಡ್ಡುವುದನ್ನು ನಿಲ್ಲಿಸಿ. ಜಾತಕದ ಹೆಸರಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದೀರಿ. ನಿಮಗೆ ಜನತೆ ಅಧಿಕಾರ ನೀಡಿರುವುದು ಈ ಕೆಲಸಕ್ಕಲ್ಲ. ನೀವು ಅಧಿಕಾರದಿಂದ ಕೆಳಗಿಳಿದ ಮೇಲೆ ನಿಮ್ಮ ಜಾತಕ ಬೇರೆಯವರ ಕೈಯ್ಯಲ್ಲಿರುತ್ತದೆ ಎಂದು ಶಿವಸೇನೆ ಎಚ್ಚರಿಸಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ನಾನದ ವೇಳೆಯಲ್ಲಿ ರೈನ್ ಕೋಟ್ ಧರಿಸುವಲ್ಲಿ ನಿಪುಣರು’ ಎಂದು ಮೋದಿ ಅವರು ಸಂಸತ್‌ನಲ್ಲಿ ಮಾಡಿದ್ದ ಭಾಷಣದಲ್ಲಿ ನೀಡಿದ್ದ ಹೇಳಿಕೆ ತೀವ್ರ ಟೀಕೆಗೆ ಒಳಗಾಗಿತ್ತು. ಪ್ರಧಾನಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ‘ಅದು ಸಿಂಗ್ ಅವರನ್ನು ಹೊಗಳಿ ನೀಡಿದ್ದ ಹೇಳಿಕೆ’ಎಂದು ಸ್ಪಷ್ಟಪಡಿಸಿದ್ದರು.
ಪ್ರಧಾನಿ ಮೋದಿ ಅವರಿಗೆ ಕಟುವಾಗಿ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇತರರ ಸ್ನಾನದ ಕೋಣೆಯಲ್ಲಿ ಇಣುಕಿ ನೋಡುವುದನ್ನು ಪ್ರಧಾನಿ ಬಹಳ ಇಷ್ಟ ಪಡುತ್ತಾರೆ ಎಂದಿದ್ದರು.