ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಫಲಿತಾಂಶದಿಂದಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರಿಂದ ಶಿವಸೇನೆ ಮತ್ತು ಬಿಜೆಪಿ ಮತ್ತೆ ಕೈಜೋಡಿಸುವ ಹೊರತಾಗಿ ಬೇರೆ ಆಯ್ಕೆಯಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಶಿವಸೇನೆ ಮತ್ತು ಬಿಜೆಪಿ ಪಕ್ಷಕ್ಕೆ ಒಂದಾಗಿ ಅಧಿಕಾರ ನಡೆಸಬಹುದಾಗಿದೆ. ಅದನ್ನು ಹೊರತುಪಡಿಸಿ ಬೇರೆ ದಾರಿಗಳಿಲ್ಲ. ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಉಭಯ ಪಕ್ಷಗಳ ನಾಯಕರು ಸರಿಯಾದ ಸಮಾಲೋಚನೆ ನಡೆಸಿ ಪ್ರೌಢತೆಯಿಂದ ತೀರ್ಮಾನ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಖಾಸಗಿ ಚಾನೆಲ್‌ಗೆ ತಿಳಿಸಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಅವಹೇಳನಾಕಾರಿ ಲೇಖನಗಳನ್ನು ಪ್ರಕಟಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಿವಸೇನೆ ಗೆಳೆತನ ಬಯಸಿದಲ್ಲಿ ಮಿತ್ರಪಕ್ಷದ ಮುಖಂಡರ ವಿರುದ್ಧ ಅವಹೇಳನಾಕಾರಿ ಲೇಖನಗಳನ್ನು ಪ್ರಕಟಿಸುವುದು ಸೂಕ್ತವಲ್ಲ ಎಂದರು.
ಶಿವಸೇನೆ ಪಕ್ಷ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಲ್ಲಿ ಬಿಜೆಪಿ ಪಕ್ಷದೊಂದಿಗೆ ಉತ್ತಮ ಮೈತ್ರಿಯನ್ನು ಮುಂದುವರಿಸಬಹುದಾಗಿದೆ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.