ನವದೆಹಲಿ: ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರು ಕೆಲಸದ ಸ್ಥಳದಲ್ಲಿ ಯಾವುದೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ ಆನ್ ಲೈನ್ ಮೂಲಕ ಶೀ ಬಾಕ್ಸ್ ಗೆ ದೂರು ನೀಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ.
ಶಿ-ಬಾಕ್ಸ್ (sexual harassment electronic box) ಪೋರ್ಟಲ್ ನ್ನು ಉದ್ಘಾಟಿಸಿ ,ಮಾತನಾಡಿದ ಸಚಿವೆ, ಕೆಲಸದ ಸ್ಥಳದಲ್ಲಿ ಮಹಿಳೆಯರು ಎದುರಿಸುವ ಲೈಂಗಿಕ ಕಿರುಕುಳದ ಸ್ವರೂಪ ಮತ್ತು ಪ್ರಮಾಣವನ್ನು ಅಂದಾಜು ಮಾಡಲು ಸದ್ಯದಲ್ಲಿಯೇ ರಾಷ್ಟ್ರೀಯ ಸಮೀಕ್ಷೆಯೊಂದನ್ನು ನಡೆಸಲಾಗುವುದು ಎಂದರು.
ಈ ಪೋರ್ಟಲ್ ನಲ್ಲಿ ಆರಂಭದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿರುವ ಮಹಿಳೆಯರು ದೂರು ದಾಖಲಿಸಬಹುದು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರು ಕೂಡ ಲೈಂಗಿಕ ಕಿರುಕುಳ ಕೇಸುಗಳಿಗೆ ಸಂಬಂಧಪಟ್ಟಂತೆ ದೂರು ಸಲ್ಲಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.