ಭೋಪಾಲ್ : ಮಧ್ಯಪ್ರದೇಶದ ಶಿಕ್ಷಣ ತಜ್ಞನೊಬ್ಬ ಆಗ್ರಾದ ತಾಜ್ಮಹಲ್ ವಿನ್ಯಾಸವನ್ನೇ ಹೋಲುವ ಸುಂದರ ಸೌಧ ನಿರ್ಮಿಸಿ ಪತ್ನಿಗೆ ಪ್ರೇಮದ ಕಾಣಿಕೆ ನೀಡಿ ಗಮನ ಸೆಳೆದಿದ್ದಾರೆ.
ಬುರ್ಹಾನ್ಪುರ ನಿವಾಸಿ ಆನಂದ್ ಚೌಕ್ಷೆ ಆ ಪ್ರೇಮ ಸೌಧ ನಿರ್ಮಿಸಿದ ಪತಿರಾಯ. ಹಿಂದೊಮ್ಮೆ ಪತ್ನಿ ಮಂಜುಶಾ ಚೌಕ್ಷೆ ಜತೆಗೂಡಿ ಆಗ್ರಾಕ್ಕೆ ಹೋಗಿ ಪ್ರೇಮ ಸೌಧ ನೋಡಿದ್ದ ಆನಂದ್ ಅದರ ವಿನ್ಯಾಸಕ್ಕೆ ಮಾರು ಹೋಗಿದ್ದರು.
ಪತ್ನಿ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಅವರು, ಸುಂದರವಾದ ಒಂದು ಮನೆ ನಿರ್ಮಿಸಿ ಅರ್ಪಿಸಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಮೊದಲು 80 ಅಡಿ ಎತ್ತರದ ಭವ್ಯ ಬಂಗಲೆ ನಿರ್ಮಿಸಬೇಕು ಎಂಬ ಯೋಚನೆಯಲ್ಲಿದ್ದರು. ಆದರೆ, ಅದಕ್ಕೆ ನಗರ ಪಾಲಿಕೆ ಅನುಮತಿ ನಿರಾಕರಿಸಿದ್ದರಿಂದ ಚಿಂತಿತರಾಗಿದ್ದರು. ಅದೇ ಸಂದರ್ಭ ಆಗ್ರಾಕ್ಕೆ ಭೇಟಿ ನೀಡಿದಾಗ ತಾಜ್ಮಹಲ್ ಕಂಡು, ಅಂತಹದ್ದೇ ಪ್ರತಿರೂಪದ ಪ್ರೇಮ ಸೌಧ ಕಟ್ಟಿ ಹೆಂಡತಿಗೆ ಅರ್ಪಿಸಬೇಕೆಂದು ನಿರ್ಧರಿಸಿ ಎಂಜಿನಿಯರ್ಗಳನ್ನು ಸಂಪರ್ಕಿಸಿದ್ದರು.
ಮೂರೇ ವರ್ಷಗಳಲ್ಲಿ ತಾಜ್ ಮಹಲ್ 3ಡಿ ಇಮೇಜ್ ಆಧರಿತ ಪ್ರತಿರೂಪ ನಿರ್ಮಿಸಿದರು. 90 ಚ.ಮೀಟರ್ ವಿಸ್ತಾರ ಹಾಗೂ 60 ಚ.ಮೀ ಎತ್ತರ ಉಳ್ಳ ಪ್ರೇಮ ಸೌಧ ಈಗ ಜನರ ಗಮನ ಸೆಳೆಯುತ್ತಿದೆ. ಈ ತಾಜ್ಮಹಲ್ ಪ್ರತಿರೂಪ ಕಟ್ಟಡ ಎರಡು ಮಹಡಿ ಹೊಂದಿದ್ದು ತಲಾ ಎರಡು ಬೆಡ್ರೂಮ್ಗಳನ್ನು ಹೊಂದಿದೆ. ಅಡುಗೆ ಮನೆ, ಗ್ರಂಥಾಲಯ ಮತ್ತು ಧ್ಯಾನ ಕೊಠಡಿಗಳನ್ನು ಒಳಗೊಂಡಿದೆ. ''ಬುರ್ಹಾನ್ಪುರಕ್ಕೆ ಬರುವ ಪ್ರವಾಸಿಗರು ನನ್ನ ಈ ಪ್ರೇಮ ಸೌಧಕ್ಕೆ ಭೇಟಿ ನೀಡದೇ ಹೋಗಲಾರರು,'' ಎಂದು ಆನಂದ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.