ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಎಪಿ ಮಾಜಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಕೋರಲಾದ ಮಧ್ಯಂತರ ವೈದ್ಯಕೀಯ ಜಾಮೀನು ವಿಸ್ತರಣೆಯನ್ನು ಜಾರಿ ನಿರ್ದೇಶನಾಲಯ ಆಕ್ಷೇಪ ವ್ಯಕ್ತಪಡಿಸಿದೆ.
ಅಲ್ಲದೇ ಸತ್ಯೇಂದರ್ ಜೈನ್ ಅವರು ಜೈಲಿನ ಆವರಣದಲ್ಲಿ ಸ್ವಿಮ್ಮಿಂಗ್ ಪೂಲ್ ಬೇಕೆಂದು ಕೇಳುತ್ತಿದ್ದಾರೆ ಎಂಬುದಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಜೈನ್ ಅವರ ವೈದ್ಯಕೀಯ ಸಲಹೆಯನ್ನ ಉಲ್ಲೇಖಿಸಿ ಅವರ ಮಧ್ಯಂತರ ಜಾಮೀನು ವಿಸ್ತರಣೆ ಮಾಡುವಂತೆ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಸತ್ಯೇಂದರ್ ಜೈನ್ ಅವರು ಮಹತ್ವದ ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕೆಲವು ಬಹುಮುಖ್ಯ ಚಿಕಿತ್ಸೆಗಳಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಬೇಕು ಎಂದು ಸಿಂಘ್ವಿ ಕೋರಿದ್ದರು.
ಜೈನ್ ಅವರಿಗೆ ಮಧ್ಯಂತರ ಜಾಮೀನು ವಿಸ್ತರಣೆ ಮಾಡಲು ವೈದ್ಯರ ಸಲಹೆ ಸಾಲುವುದಿಲ್ಲ ಎಂದು ಪ್ರತಿಪಾದಿಸಿದ ಜಾರಿ ನಿರ್ದೇಶನಾಲಯ, ಜಾಮೀನು ವಿಸ್ತರಣೆ ನೀಡುವ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಅವರು ಜೈಲಿನಲ್ಲಿ ಈಜುಕೊಳ ಬೇಕೆಂದು ಕೇಳುತ್ತಿದ್ದಾರೆ. ಎಲ್ಲರಿಗೂ ಇದು ಸಾಧ್ಯವಾಗಲ್ಲ ಎಂದು ಇಡಿ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ತಿಳಿಸಿದ್ದಾರೆ.