ತಮಿಳುನಾಡಿನ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಜಯಲಲಿತಾ ಆಪ್ತೆ ಶಶಿಕಲಾ ಮತ್ತು ಸೋದರಳಿಯ ಟಿಟಿವಿ ದಿನಕರನ್ ಅವರನ್ನ ಅಣ್ಣಾಡಿಎಂಕೆ ಪಕ್ಷದಿಂದ ಹೊರಹಾಕಿರುವುದಾಗಿ ಹಣಕಾಸು ಸಚಿವ ಜಯಕುಮಾರ್ ಘೋಷಿಸಿದ್ದಾರೆ.
ಸಿಎಂ ಪಳನಿಸ್ವಾಮಿ ನಿವಾಸದಲ್ಲಿ ನಡೆದ ಸಚಿವರು ಮತ್ತು ಶಾಸಕರ ಸಭೆ ಬಳಿಕ ಪ್ರತಿಕ್ರಿಯಿಸಿದ ಜಯಕುಮಾರ್, `ಒಂದು ಕುಟುಂಬ ಅಣ್ಣಾಡಿಎಂಕೆ ಪಕ್ಷವನ್ನ ನಿಯಂತ್ರಿಸಲು ಸಾಧ್ಯವಿಲ್ಲ. ಶಶಿಕಲಾ ಮತ್ತು ಮನ್ನಾರ್ ಗುಡಿ ಗುಂಪನ್ನ ಪಕ್ಷದಿಂದ ಹೊರಹಾಕಿದ್ದೇವೆ. ಎಲ್ಲ ಸಚಿವರು, 123 ಶಾಸಕರು ಮತ್ತು ರಾಜ್ಯದ ಜನರ ಅಭಿಪ್ರಾಯ ಪಡೆದು ಅವಿರೋಧವಾಗಿ ಹೊರಹಾಕುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಯಕುಮಾರ್ ತಿಳಿಸಿದ್ದಾರೆ.
ಪಕ್ಷದಿಂದ ಟಿಟಿವಿ ದಿನಕರನ್ ಮತ್ತು ಅವರ ಕುಟುಂಬದ ಸಂಪರ್ಕವನ್ನ ಕಡಿತಗೊಳಿಸುತ್ತಿದ್ದು, ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಬಣಗಳು ಸೇರಿ ರಚಿಸುವ ಸಮಿತಿ ಸರ್ಕಾರವನ್ನ ನಿಯಂತ್ರಿಸಲಿದೆ. ದಿನನಿತ್ಯದ ಸರ್ಕಾರದ ಕಾರ್ಯವೈಖರಿಯನ್ನ ನಿಗಾ ಇಡಲಿದೆ ಎಂದು ಜಯಕುಮಾರ್ ಹೇಳಿದ್ದಾರೆ.
ನಿನ್ನೆ ನಡೆದ ಪನ್ನೀರ್ ಸೆಲ್ವಂ ಮತ್ತು ಪಳನಿ ಸ್ವಾಮಿ ಬಣಗಳ ವಿಲೀನ ಮಾತುಕತೆ ವೇಳೆ ಶಶಿಕಲಾ ಮತ್ತು ದಿನಕರನ್ ಅವರನ್ನ ಹೊರಹಾಕಿದರೆ ಮಾತ್ರ ವಿಲೀನ ಸಾಧ್ಯ, ಜಯಲಲಿತಾ ನಿಧನಕ್ಕೂ ಮುನ್ನ ದಿನಕರನ್ ಪಕ್ಷದ ಸದಸ್ಯನೂ ಆಗಿರಲಿಲ್ಲ, ಅ ದುವರಿಗೆ ನೀಡಿರುವ ಪಕ್ಷದ ಉಪ ಕಾರ್ಯದರ್ಶಿ ಹುದ್ದೆ ಕಾನೂನು ಬಾಹಿರ ಎಂದು ಪನ್ನೀರ್ ಸೆಲ್ವಂ ಹೇಳಿದ್ದರು. ಅದರಂತೆ ಈಗ ಸಬೆಯಲ್ಲಿ ನಿರ್ಧಾರ ಪ್ರಕಟಿಸಲಾಗಿದೆ.
ಈ ಹೊಸ ರಾಜಕೀಯ ಬೆಳವಣಿಗೆಯಿಂದ ವಿಚಲಿತರಾಗಿರುವ ಟಿಟಿವಿ ದಿನಕರನ್ ತಮ್ಮ ಬಲಪ್ರದರ್ಶನಕ್ಕೆ ಮುಂದಾಗಿದ್ದು, ಮಧ್ಯಾಹ್ನ 3 ಗಂಟೆಗೆ ಶಾಸಕರ ಸಭೆ ಕರೆದಿದ್ದಾರೆ. 3 ಶಾಸಕರು ಮಾತ್ರ ದಿನಕರನ್`ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.