ಶಶಿಕಲಾ ಬಣದಲ್ಲಿ ಗುರುತಿಸಿಕೊಂಡಿರುವ ತಮಿಳುನಾಡು ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ಮತ್ತು ನಟ ಶರತ್ ಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಜಯಲಲಿತಾ ನಿಧನದ ಬಳಿಕ ತೆರವಾದ ಆರ್.ಕೆ. ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜಕಾರಣಿಗಳ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಬೆಳ್ಳಂಬೆಳಗ್ಗೆ ಈ ಇಬ್ಬರು ನಾಯಕರ ನಿವಾಸದ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ವಿಜಯ ಭಾಸ್ಕರ್ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ ಆಸ್ತಿ ಇರುವ 34 ಕಡೆ ದಾಳಿ ನಡೆದಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಮತದಾರನಿಗೆ ಹಣ ನೀಡುತ್ತಿದ್ದ ದೃಶ್ಯವಿತ್ತು. ಅಲ್ಲದೆ, ಶಶಿಕಲಾ ಬಣದ ಅಭ್ಯರ್ಥಿಗೆ ಮತ ಹಾಕುವಂತೆ ಆತ ಹೇಳುತ್ತಿದ್ದ. ಇದರ ಆಧಾರದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಶಶಿಕಲಾ ಬಣಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಆರ್,ಕೆ, ನಗರ ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಲು ನಿರ್ಧರಿಸಿರುವ ಕೆಲ ನಾಯಕರು ಹಣದ ಹೊಳೆ ಹರಿಸುತ್ತಿದ್ದಾರೆ ಎನ್ನಲಾಗಿದೆ.ಹಣ ಹಂಚಿಕೆಯಲ್ಲಿ ವಿಜಯ ಭಾಸ್ಕರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.