ಮುಂಬೈ: ರಿಲಯನ್ಸ್ ಉದ್ಯಮಿ ಮುಖೇಶ್ ಅಂಬಾನಿ ಮನೆಯ ಆವರಣದಲ್ಲಿ ಕಾರೊಂದರಲ್ಲಿ ಸ್ಪೋಟಕ ಮತ್ತು ಬೆದರಿಕೆ ಪತ್ರವಿರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಸಚಿನ್ ವಾಜೆ ಅವರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ರನ್ನು ಸುಮಾರು 12 ಗಂಟೆಗಳ ವಿಚಾರಣೆ ನಡೆಸಿದ ಎನ್ಐಎ ತಂಡ ಬಳಿಕ ಬಂಧಿಸಿದೆ. ಈ ಪ್ರಕರಣದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಅಟೋ ಬಿಡಿ ಭಾಗಗಳ ಮಾರಾಟಗಾರ ಮನ್ಸುಖ್ ಹಿರೇನ್ ಸಾವಿನಲ್ಲಿ ಸಚಿನ್ ಕೈವಾಡವಿದೆ ಎಂದು ಮೃತನ ಪತ್ನಿ ಆರೋಪಿಸಿದ್ದಳು.
ಎನ್ ಕೌಂಟರ್ ತಜ್ಞನಾಗಿರುವ ಸಚಿನ್ ಇದುವರೆಗೆ 63 ಎನ್ ಕೌಂಟರ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೊಮ್ಮೆ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದರು. ಇದೀಗ ಅವರ ಮೇಲೆ ಕೊಲೆ, ಸಾಕ್ಷ್ಯ ನಾಶದಂತಹ ಗಂಭೀರ ಆರೋಪ ಎದುರಾಗಿದೆ.