ಲಕ್ನೋ: ಮದುವೆ ಮನೆಯಿಂದಲೇ ಪ್ರಿಯತಮನನ್ನು ಗನ್ ತೋರಿಸಿ ತನ್ನೊಂದಿಗೆ ಕರೆದೊಯ್ದ ರಿವಾಲ್ವರ್ ರಾಣಿ ಕೊನೆಗೂ ತನ್ನ ಪ್ರಿಯತಮನನ್ನು ಮದುವೆಯಾಗಿದ್ದಾಳೆ.
ಉತ್ತರ ಪ್ರದೇಶದ ವರ್ಷ ಸಾಹು ಎಂಬಾಕೆ ಕೆಲವು ದಿನಗಳ ಹಿಂದೆ ಮದುವೆ ಮನೆಯಿಂದ ತನ್ನ ಪ್ರಿಯತಮನನ್ನು ಅಲ್ಲಿದ್ದವರಿಗೆ ಗನ್ ತೋರಿಸಿ ಅಪಹರಿಸಿದ್ದಳು. ಇದೀಗ ಸ್ಥಳೀಯ ದೇವಾಲಯವೊಂದರಲ್ಲಿ ಆಕೆ ಕೊನೆಗೂ ತಾನು ಪ್ರೀತಿಸಿದ್ದ ಅಶೋಕ್ ಯಾದವ್ ನನ್ನು ಮದುವೆಯಾಗಿ ಸುದ್ದಿಯಾಗಿದ್ದಾಳೆ.
ಈಕೆಯ ಈ ಪ್ರತಾಪ ನೋಡಿ ರಿವಾಲ್ವರ್ ರಾಣಿ ಎಂದು ಹೆಸರು ಬಂದಿತ್ತು. ಇದೀಗ ಸ್ಥಳೀಯ ಶಿವ ಸೇನೆ ಕಾರ್ಯಕರ್ತರ ನೆರವಿನೊಂದಿಗೆ ತಾನು ಹೊತ್ತೊಯ್ದ ಹುಡುಗನನ್ನೇ ಮದುವೆಯಾಗಿದ್ದಾಳೆ. ಅಶೋಕ್ ಯಾದವ್ ವರ್ಷಾ ಜತೆ ಲೀವ್ ಇನ್ ಸಂಬಂಧ ಹೊಂದಿದ್ದ. ಆದರೆ ಆಕೆಯನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದ.
ಇದರಿಂದ ಕೆರಳಿದ ಯುವತಿ ಗನ್ ತೋರಿಸಿ ಮದುವೆ ಮನೆಯಿಂದಲೇ ಆತನನ್ನು ಅಪಹರಿಸಿದ್ದಳು. ನಂತರ ವರ್ಷಾ ಮನೆಯವರು ನೀಡಿದ ದೂರಿನಂತೆ ಅಶೋಕ್ ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ಇಬ್ಬರೂ ಮದುವೆಯಾಗುವುದರಿಂದ ಪ್ರಕರಣ ಅಂತ್ಯವಾಗಿದೆ.