ತೆಲಂಗಾಣಾ ಸರಕಾರ ಉತ್ತಮ ಮಾರ್ಗದಲ್ಲಿ ಸಾಗುತ್ತಿಲ್ಲ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕುಟುಂಬಕ್ಕಾಗಿ ತೆಲಂಗಾಣಾ ರಾಜ್ಯ ರಚನೆ ಮಾಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣಾ ರಾಜ್ಯ ರಚನೆಯಾಗಿ ಮೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಮಾತನಾಡಿದ ಅವರು, ತೆಲಂಗಾಣಾ ರಾಜ್ಯದ ಜನತೆಯ ಕನಸುಗಳನ್ನು ಈಡೇರಿಸಲು ರಾಜ್ಯ ರಚನೆ ಮಾಡಲಾಯಿತು. ಆದರೆ, ಜನತೆಯ ಕನಸುಗಳು ಕನಸಾಗಿಯೇ ಉಳಿದಿವೆ. ಸರಕಾರ ಜನವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಸಿಆರ್ ಕುಟುಂಬದಲ್ಲಿ ಪುತ್ರ ಕೆ.ಟಿರಾಮರಾವ್ ಸಚಿವರಾಗಿದ್ದಾರೆ. ಪುತ್ರಿ ಕೆ.ಕವಿತಾ ಲೋಕಸಭೆ ಸದಸ್ಯೆಯಾಗಿದ್ದಾರೆ, ಅಳಿಯ ಹರೀಶ್ ರಾವ್ ಸಚಿವರಾಗಿದ್ದಾರೆ. ತೆಲಂಗಾಣಾದ ವಿದ್ಯಾರ್ಥಿಗಳು ಮತ್ತು ರೈತರು ಒಂದು ಕುಟುಂಬಕ್ಕಾಗಿ ಹೋರಾಟ ಮಾಡಿದರೇ ಎಂದು ಪ್ರಶ್ನಿಸಿದ್ದಾರೆ.
ಕೇವಲ ನಾಲ್ವರಿಗಾಗಿ ತೆಲಂಗಾಣಾ ರಾಜ್ಯ ರಚನೆ ಮಾಡಲಾಯಿತೇ? ಮುಖ್ಯಮಂತ್ರಿ ಕೆಸಿಆರ್, ತಮ್ಮೊಂದಿಗೆ ವಿದ್ಯಾರ್ಥಿಗಳು, ಯುವಕರು, ರೈತರು, ಮಹಿಳೆಯರು ಮತ್ತು ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಶ್ರಮಿಸಿದೇ, ಕೇವಲ ಗುತ್ತಿಗೆದಾರರು ಭೂ ಮಾಫಿಯಾದವರ ಲಾಭಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.