ನವದೆಹಲಿ: ಅಗ್ನಿವೀರ್ ಯೋಧ ಅಜಯ್ ಕುಮಾರ್ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಸುಳ್ಳು ಎಂದು ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ.
ಲೋಕಸಭೆಯಲ್ಲಿ ಅಗ್ನಿವೀರ್ ಯೋಜನೆ ಬಗ್ಗೆ ಟೀಕಿಸಿದ್ದ ರಾಹುಲ್ ಗಾಂಧಿ ಇದರಿಂದ ಯುವಕರ ಆತ್ಮಸ್ಥೈರ್ಯ ಕುಗ್ಗುತ್ತಿದೆ. ಇದು ಸೇನೆಯ ಯೋಜನೆಯಲ್ಲ, ಮೋದಿಯ ಯೋಜನೆ ಎಂದು ಟೀಕಿಸಿದ್ದರು. ಅಲ್ಲದೆ, ಟ್ವೀಟ್ ಮಾಡಿ ಯೋಧ ಅಜಯ್ ಕುಮಾರ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಸಿಕ್ಕಿಲ್ಲ. ಪರಿಹಾರ ನೀಡುತ್ತೇವೆ ಎಂದು ಹೇಳಿರುವುದೆಲ್ಲಾ ಸುಳ್ಳು ಎಂದು ಅಜಯ್ ಕುಟುಂಬದವರ ವಿಡಿಯೋ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
ಆದರೆ ಇದು ಸುಳ್ಳು ಎಂದು ಸೇನೆ ಸ್ಪಷ್ಟಪಡಿಸಿದೆ. ಯೋಧ ಅಜಯ್ ಕುಮಾರ್ ಕುಟುಂಬಕ್ಕೆ 1.05 ಕೋಟಿ ರೂ. ಪರಿಹಾರ ನೀಡಲಾಗುವುದು. ಈಗಾಗಲೇ 98 ಲಕ್ಷ ರೂ. ಪಾವತಿ ಮಾಡಲಾಗಿದೆ. ಉಳಿದಂತೆ 67 ಲಕ್ಷ ರೂ. ಮೌಲ್ಯದ ಹೆಚ್ಚುವರಿ ಹಣ ಹಾಗೂ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.
1 ಕೋಟಿ ರೂ. ಪರಿಹಾರ ನೀಡುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಆದರೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಸುಳ್ಳು ಎಂದು ಸೇನೆಯೇ ಸ್ಪಷ್ಟನೆ ನೀಡಿದೆ.